ADVERTISEMENT

ಮತ ಎಣಿಕೆಗೆ ಸಿದ್ಧತೆ ನಡೆದಿದೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:22 IST
Last Updated 22 ಏಪ್ರಿಲ್ 2019, 14:22 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕೋಲಾರದಲ್ಲಿ ಸೋಮವಾರ ಲೋಕಸಭಾ ಚುನಾವಣೆಯ ಮತ ಎಣಿಕೆ ಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕೋಲಾರದಲ್ಲಿ ಸೋಮವಾರ ಲೋಕಸಭಾ ಚುನಾವಣೆಯ ಮತ ಎಣಿಕೆ ಸಿದ್ಧತೆ ಕುರಿತು ಅಧಿಕಾರಿಗಳ ಸಭೆ ನಡೆಸಿದರು.   

ಕೋಲಾರ: ‘ಲೋಕಸಭಾ ಚುನಾವಣೆಯ ಮತದಾನ ಮುಗಿದಿದ್ದು, ಮೇ 23ರಂದು ಮತ ಎಣಿಕೆ ನಡೆಯುತ್ತದೆ. ಮತ ಎಣಿಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಲೋಕಸಭಾ ಚುನಾವಣೆಯ ಮತ ಎಣಿಕೆ ಕುರಿತು ಇಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಮತದಾನ ದಿನದಂದು ವಿದ್ಯುನ್ಮಾನ ಮತಯಂತ್ರಗಳಲ್ಲಿ ಸಣ್ಣ ಪುಟ್ಟ ದೋಷ ಕಾಣಿಸಿಕೊಂಡಿದ್ದು ಬಿಟ್ಟರೆ ಹೆಚ್ಚಿನ ಸಮಸ್ಯೆಯಾಗಿಲ್ಲ. ಯಾವುದೇ ಅಹಿತಕರ ಘಟನೆ ಸಹ ನಡೆದಿಲ್ಲ’ ಎಂದರು.

‘ಮತ ಎಣಿಕೆಯಂದು ಸಿಬ್ಬಂದಿಯು ಹೆಚ್ಚು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆಗೆ ಒಂದು ತಿಂಗಳು ಕಾಲಾವಕಾಶವಿದ್ದು, ವಾರದ ಮೊದಲು ಸಿದ್ಧತೆ ಕೈಗೊಳ್ಳಲಾಗುವುದು. ಇವಿಎಂಗಳಲ್ಲಿನ ಸಮಸ್ಯೆ ಸರಿಪಡಿಸಿ ಶಾಂತಿಯುತವಾಗಿ ಮತ್ತು ಪ್ರಾಮಾಣಿಕವಾಗಿ ಮತದಾನ ನಡೆಸಿದಂತೆಯೇ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಸಬೇಕು’ ಎಂದು ಸೂಚಿಸಿದರು. 

ADVERTISEMENT

‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತ ಎಣಿಕೆಗೆ ತಲಾ 12 ಟೇಬಲ್‌ ಹಾಗೂ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೂ 14 ಟೇಬಲ್‌ ವ್ಯವಸ್ಥೆ ಮಾಡಲಾಗುವು’ ಎಂದು ವಿವರಿಸಿದರು.

‘ಶ್ರೀನಿವಾಸಪುರ, ಚಿಂತಾಮಣಿ, ಕೆಜಿಎಫ್ ಮತ್ತು ಕೋಲಾರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ತಲಾ ಒಂದು ದೊಡ್ಡ ಕೊಠಡಿಯಲ್ಲಿ 14 ಟೇಬಲ್‌ ಹಾಕಲಾಗುವುದು. ಉಳಿದಂತೆ ಬಂಗಾರಪೇಟೆ, ಮುಳಬಾಗಿಲು, ಮಾಲೂರು ಕ್ಷೇತ್ರಕ್ಕೆ ತಲಾ 2 ಕೊಠಡಿಗಳಲ್ಲಿ 14 ಹಾಗೂ ಶಿಡ್ಲಘಟ್ಟ ಕ್ಷೇತ್ರಕ್ಕೆ 12 ಟೇಬಲ್‌ ಹಾಕಲಾಗುತ್ತದೆ. 12 ಕೊಠಡಿಗಳಲ್ಲೂ ಪ್ರತಿ ಟೇಬಲ್‌ಗೆ 3 ಸಿಬ್ಬಂದಿ ನಿಯೋಜಿಸಲಾಗುವುದು. ಸ್ಟ್ರಾಂಗ್‌ರೂಂ ಪಕ್ಕದ ಕೊಠಡಿಗಳನ್ನೇ ಬಹುತೇಕ ಮತ ಎಣಿಕೆಗೆ ಬಳಸಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

22 ಪ್ರಕರಣ ದಾಖಲು: ‘ಚುನಾವಣಾ ಮಾದರಿ ನೀತಿಸಂಹಿತೆ ಜಾರಿಯಾದ ದಿನದಿಂದ ಮತದಾನ ಮುಗಿಯುವವರೆಗೆ ನೀತಿಸಂಹಿತೆ ಉಲ್ಲಂಘನೆ ಸಂಬಂಧ 22 ಪ್ರಕರಣ ದಾಖಲಾಗಿವೆ. ಯಾವುದೇ ದಾಖಲೆಪತ್ರ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ₹ 36 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ಸಾಗಣೆ ಸಂಬಂಧ 466 ಪ್ರಕರಣ ದಾಖಲಿಸಿ ₹ 40.78 ಮೌಲ್ಯದ 13,877 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.