ಬಂಗಾರಪೇಟೆ: ಉದ್ಯೋಗ ಅರಸಿಕೊಂಡು ಪ್ರತಿನಿತ್ಯ ತಾಲ್ಲೂಕಿನ ಯುವಕ ಯುವತಿಯರು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಇದನ್ನು ತಪ್ಪಿಸುವ ಸ್ಥಳೀಯವಾಗಿ ಉದ್ಯೋಗ ಅವಕಾಶ ಸೃಷ್ಟಿಸಲು ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕೈಗಾರಿಕಾ ವಲಯ ಮತ್ತು ಯೋಜಿತ ನಗರ ನಿರ್ಮಾಣ ಮಾಡಲು ಜಮೀನು ಗುರುತಿಸಿ, ಮಂಜೂರು ಮಾಡಲಾಗಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಡಿ.ಕೆ ಹಳ್ಳಿ ಗ್ರಾಮ ಪಂಚಾಯಿತಿಯಿಂದ ಮಂಗಳವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಭಾರತ್ ನಗರದಲ್ಲಿನ ಉದ್ಯಾನವನದಲ್ಲಿ ₹1 ಕೋಟಿ ಅನುದಾನದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗುವುದು. ₹3 ಕೋಟಿ ಅನುದಾನದಲ್ಲಿ ದಾಸರ ಹೊಸಹಳ್ಳಿ ಕೆರೆ ಅಭಿವೃದ್ಧಿ ಮಾಡಲಾಗುವುದು. ₹20 ಕೋಟಿ ವೆಚ್ಚದಲ್ಲಿ ಆಲದಮರದಿಂದ ಕೃಷ್ಣಾವರಂವರಿಗೆ ಡಬಲ್ ರಸ್ತೆ ನಿರ್ಮಿಸಿ, ಬೀದಿ ದೀಪಗಳನ್ನು ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ರಸ್ತೆ ಬದಿಯಲ್ಲಿ ಕಸ ಸುರಿಯುವುದರಿಂದ ವಾತಾವರಣ ಕಲುಷಿತಗೊಂಡು, ರೋಗರುಜಿನಗಳು ಬರುತ್ತವೆ. ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಸ ಸಂಗ್ರಹಿಸುವ ವಾಹನಕ್ಕೆ ನೀಡಬೇಕು. ಮನೆಮನೆಯಿಂದ ಕಸ ಸಂಗ್ರಹಿಸಲು ಶಾಸಕರ ವಿಶೇಷ ಅನುದಾನದಲ್ಲಿ ಎರಡು ಕಸದ ವಾಹನಗಳನ್ನು ನೀಡಲಾಗುವುದು. ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ ಎಂದು ಹೇಳಿದರು.
ಕಾರ್ಯ ನಿರ್ವಹಣಾಧಿಕಾರಿ ಎಚ್. ರವಿ ಕುಮಾರ್, ಗ್ರಾಮಗಳಲ್ಲಿನ ವಾರ್ಡ್ ಸಭೆಗಳಲ್ಲಿ ನರೇಗಾ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯಡಿ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಚರಂಡಿ ಸ್ವಚ್ಚತೆ ಮತ್ತು ನೈರ್ಮಲ್ಯ, ಸಿಸಿ ರಸ್ತೆಗಳ ನಿರ್ಮಾಣ, ರಾಜ ಕಾಲುವೆಗಳು, ಕೆರೆ ಅಭಿವೃದ್ಧಿ, ಸಮುದಾಯ ಭವನ, ಉದ್ಯಾನವನಗಳ ಅಭಿವೃದ್ಧಿ, ಗೋ ಕಟ್ಟೆ, ಅಂಗನವಾಡಿ ಮತ್ತು ಶಾಲಾ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಅನುಮೋದನೆ ಪಡೆಯುವ ಉದ್ದೇಶದಿಂದ ಗ್ರಾಮ ಸಭೆ ಆಯೋಜಿಸಲಾದೆ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷ ಸುರೇಶ್, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೋಪಾಲ ರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಸ್ಕರ್, ಗ್ರಾ.ಪಂ ಸದಸ್ಯರಾದ ಪವಿತ್ರ ಬಾಬು, ಸುಧಾ ಗೌಡ, ಯಲ್ಲಮ್ಮ, ವಿಕ್ಟೋರಿಯಾ, ಪುಣ್ಯ ಮೂರ್ತಿ, ಚಂದ್ರಮ್ಮ, ರಮೇಶ್, ಜಯಲಕ್ಷ್ಮಿ, ಭಾಗ್ಯಮ್ಮ, ಪ್ರೇಮನಾಥ, ಶೈಲವತಿ, ಎಂ. ಕೃಷ್ಣ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.