ADVERTISEMENT

ಆರೋಗ್ಯ ಕೇಂದ್ರದಲ್ಲಿ ಖಾಸಗಿ ಮಳಿಗೆ

ನಂಗಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:15 IST
Last Updated 12 ಅಕ್ಟೋಬರ್ 2020, 8:15 IST
ನಂಗಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳಗಿನ ಆವರಣದಲ್ಲಿ ವ್ಯಕ್ತಿಯೊಬ್ಬರು ನಂದಿನಿ ಪಾರ್ಲರ್ ಪೆಟ್ಟಿಗೆ ಅಂಗಡಿ ಇಟ್ಟಿರುವುದು
ನಂಗಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಒಳಗಿನ ಆವರಣದಲ್ಲಿ ವ್ಯಕ್ತಿಯೊಬ್ಬರು ನಂದಿನಿ ಪಾರ್ಲರ್ ಪೆಟ್ಟಿಗೆ ಅಂಗಡಿ ಇಟ್ಟಿರುವುದು   

ನಂಗಲಿ: ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಕಾಂಪೌಂಡಿನ ಒಳಗಿನ ಆವರಣದಲ್ಲಿ ವ್ಯಕ್ತಿಯೊಬ್ಬರು ರಾಜಾರೋಷವಾಗಿ ನಂದಿನಿ ಪಾರ್ಲರ್ ಮಳಿಗೆಯ ಕಬ್ಬಿಣದ ಪೆಟ್ಟಿಗೆಯನ್ನು ಇಟ್ಟು ವ್ಯಾಪಾರ ನಡೆಸಲು ತಯಾರಿ ನಡೆಸಿರುವುದು ಬೆಳಕಿಗೆ ಬಂದಿದೆ.

ನಂಗಲಿ ವ್ಯಾಪ್ತಿಯ ಜನರಿಗೆ ಅನುಕೂಲಕ್ಕೆ ಎಂದು ಸುಮಾರು 35 ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಸಿಬ್ಬಂದಿಯ ವಸತಿ ಗೃಹ ಮತ್ತು ಆಂಬುಲೆನ್ಸ್ ನಿಲ್ಲಿಸಲು ಸ್ಥಳವಿದೆ. ಇಂತಹ ಆವರಣದಲ್ಲಿ ತೊಂಡಹಳ್ಳಿಯ ವ್ಯಕ್ತಿಯೊಬ್ಬರು ಶನಿವಾರ ತಡರಾತ್ರಿ ಆಸ್ಪತ್ರೆಯ ಸಿಬ್ಬಂದಿಯ ಗಮನಕ್ಕೆ ತರದೆ ನಂದಿನಿ ಪಾರ್ಲರ್ ಪೆಟ್ಟಿಗೆಯನ್ನು ಇಟ್ಟು ವ್ಯಾಪಾರ ಮಾಡಲು ತಯಾರು ಮಾಡಿಕೊಂಡಿದ್ದಾರೆ. ಇದರಿಂದ ಆಸ್ಪತ್ರೆಯ ಆವರಣ ವ್ಯಾಪಾರಿಗಳ ಅಡ್ಡೆಯಾಗಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿ ಅಂಗಡಿ ಅಥವಾ ಇನ್ನಿತರೆ ಚಟುವಟಿಕೆ ನಡೆಸಲು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಅನುಮತಿ ಪಡೆಯಬೇಕು. ಆದರೆ ಸಮಿತಿಯ ಗಮನಕ್ಕೆ ಬರದೆ ಅಂಗಡಿ ಇಡಬಾರದು. ಆಸ್ಪತ್ರೆ ಆವರಣದಲ್ಲಿ ಅಂಗಡಿ ತೆರೆದರೆ ಸ್ವಚ್ಛತೆಗೆ ತೊಂದರೆಯಾಗಲಿದೆ ಎಂದು ಸ್ಥಳೀಯಯೊಬ್ಬರು ಹೇಳಿದರು.

ADVERTISEMENT

ಈ ಸಂಬಂಧದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿಜಯ್ ಕುಮಾರ್ ಮಾತನಾಡಿ,ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ತಡರಾತ್ರಿ ಯಾರೋ ನಂದಿನಿ ಪಾರ್ಲರ್ ಪೆಟ್ಟಿಗೆಯನ್ನು ಇಟ್ಟು ಅಂಗಡಿ ತೆರೆಯಲು ಮುಂದಾಗಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಕೂಡಲೇಪೆಟ್ಟಿಗೆ ಅಂಗಡಿಯನ್ನು ಆವರಣದಿಂದ ತೆಗೆಯುವಂತೆ ವೈದ್ಯರಿಗೆ ಸೂಚಿಸಲಾಗಿದೆ. ಅಂಗಡಿ ತೆರೆಯಲು ಹೊರಟವರಿಗೆ ನೋಟಿಸನ್ನು ನೀಡಿ ತೆರವು ಮಾಡುವಂತೆ ಸೂಚಿಸಲಾಗಿದೆ. ತೆರವು ಮಾಡದಿದ್ದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.