ADVERTISEMENT

ಕೋಲಾರ| ಸರ್ಕಾರಿ ಜಾಗ ಪ್ರಿಯಾಂಕ್‌ ತಂದೆ ಆಸ್ತಿಯೇ?: ಮಾಜಿ ಸಂಸದ ಎಸ್‌.ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:56 IST
Last Updated 13 ಅಕ್ಟೋಬರ್ 2025, 6:56 IST
<div class="paragraphs"><p>ಮಾಜಿ ಸಂಸದ ಎಸ್‌.ಮುನಿಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು</p></div>

ಮಾಜಿ ಸಂಸದ ಎಸ್‌.ಮುನಿಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು

   

ಕೋಲಾರ: ಸರ್ಕಾರಕ್ಕೆ ಸಂಬಂಧಿಸಿದ ಜಾಗಗಳಲ್ಲಿ ಆರ್‌ಆರ್‌ಎಸ್‌ ಚಟುವಟಿಕೆ ನಿಯಂತ್ರಿಸುವಂತೆ ಮುಖ್ಯಮಂತ್ರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿರುವುದು ಖಂಡನೀಯ. ಸರ್ಕಾರದ ಜಾಗವೇನು ಅವರ ತಂದೆ ಆಸ್ತಿಯೇ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಎಸ್‌.ಮುನಿಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಆರ್‌ಎಸ್‌ಎಸ್‌ ಪಥಸಂಚಲನದ ಬಳಿಕ ಮಾತನಾಡಿದ ಅವರು, ‘ಈದ್‌ ಮಿಲಾದ್‌, ಬಕ್ರೀದ್‌ ಹಬ್ಬಗಳ ಸಮಯದಲ್ಲಿ ಪ್ರಾರ್ಥನೆಗೆ ರಸ್ತೆ, ಬಸ್, ರೈಲು ನಿಲ್ದಾಣ ಸೇರಿದಂತೆ ಎಲ್ಲೆಂದರಲ್ಲಿ ಅವಕಾಶ ಮಾಡಿಕೊಡುತ್ತೀರಿ. ಆದರೆ, ಆರ್‌ಎಸ್ಎಸ್‌ಗೆ ಜಾಗ ಕೊಡುವುದಿಲ್ಲವೇ? ಇದು ಬರೀ ಆರ್‌ಎಸ್‌ಎಸ್‌ಗೆ ಮಾಡಿದ ಅವಮಾನ ಅಲ್ಲ; ಇಡೀ ದೇಶಕ್ಕೆ ಆಗಿರುವ ಅವಮಾನ’ ಎಂದು ಹರಿಹಾಯ್ದರು.

ADVERTISEMENT

ತಮ್ಮ ಪೂರ್ವಜರಿದ್ದ ಮನೆಗೆ ಬೆಂಕಿ ಇಟ್ಟು ಸುಟ್ಟವರು ಯಾರು? ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗಿದವರು ಯಾರು? ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟವರು ಯಾರು ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಖರ್ಗೆ ತಾಲಿಬಾನ್‌, ಪಾಕಿಸ್ತಾನ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಒಂದು ಸಮುದಾಯ ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಹಿಂದೂ ಧರ್ಮ, ಹಿಂದೂ ಸಂಸ್ಕೃತಿ ವಿರುದ್ಧವಾಗಿ ಮಾತನಾಡಿದರೆ ತಮಗೆ ಹೆಚ್ಚು ಅವಕಾಶ ಸಿಗುತ್ತದೆ ಎಂಬ ಭಾವನೆಯನ್ನು ಪ್ರಿಯಾಂಕ್‌ ಹೊಂದಿದ್ದಾರೆ ಎಂದು ಟೀಕಿಸಿದರು.

ತಮ್ಮ ಇಲಾಖೆಗಳಲ್ಲಿ ಎಷ್ಟು ಭ್ರಷ್ಟಾಚಾರ, ಲಂಚಾವತಾರ ನಡೆಯುತ್ತಿದೆ ಎಂಬುದು ಗೊತ್ತಾದರೆ ತಾವು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಾಗುತ್ತದೆ. ಕಲಬುರಗಿ ಜಿಲ್ಲೆ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಅಧಿಕಾರ ಅನುಭವಿಸಿದ್ದೀರಿ. ಆದರೆ, ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು.

ಇನ್ನು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಯಾವತ್ತೂ ಜನರಿಂದ ಚುನಾಯಿತರಾದವರಲ್ಲ. ಅವರು ಇಂದಿರಾ ಕುಟುಂಬದ ಕಾಲಿಡಿದು ನಾಮನಿರ್ದೇಶನದ ಲೀಡರ್ ಆದವರು. ಆರ್‌ಎಸ್‌ಎಸ್‌ ಟೀಕಿಸಿರುವ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಭಾರತ-ಚೀನಾ ಯುದ್ಧದಲ್ಲಿ ಆರ್‌ಎಸ್‍ಎಸ್ ಪಾತ್ರದ ಕುರಿತು ಅರಿತುಕೊಳ್ಳಿ, ತಮ್ಮದೇ ಪಕ್ಷದ ನೆಹರೂ ಪ್ರಧಾನಿಯಾಗಿ‌ದ್ದಾಗ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಆರ್‌ಎಸ್‍ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ್ದನ್ನು ನೆನಪಿಸಿಕೊಳ್ಳಿ. ದೇಶದ ಜನರಿಗೆ ತೊಂದರೆಯಾದರೆ ಅಲ್ಲಿ ಆರ್‍ಎಸ್‍ಎಸ್ ಪ್ರತ್ಯಕ್ಷವಾಗುತ್ತದೆ ಎಂದರು.

ಸಚಿವ ಪ್ರಿಯಾಂಕ್‌ ಖರ್ಗೆ ಕೂಡಲೇ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಅವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ ಅವರು ಪಾಲ್ಗೊಂಡ ಕಾರ್ಯಕ್ರಮದಲೆಲ್ಲಾ ಕಪ್ಪು ಬಾವುಟ ತೋರಿಸಲಾಗುವುದು
ಎಸ್‌.ಮುನಿಸ್ವಾಮಿ ಮಾಜಿ ಸಂಸದ

‘ಡಿಕೆಶಿಯಿಂದ ಸಂವಿಧಾನಕ್ಕೆ ಅಪಪ್ರಚಾರ’

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜನರ ಕುಂದುಕೊರತೆ ಆಲಿಸಲು ಹೋದಾಗ ಅಲ್ಲಿನ ಶಾಸಕರನ್ನು ಅವಮಾನಿಸಿದ್ದಾರೆ. ಆರ್‌ಎಸ್‌ಎಸ್ ಬೈಠಕ್‌ಗೆ ಹೋಗಿ ವಾಪಸ್ ಬಂದ ಸಂದರ್ಭದಲ್ಲಿ ಅವರ ಟೋಪಿ ತೆಗೆದು ಅವಮಾನ ಮಾಡಿದ್ದೀರಿ. ಶಿಷ್ಟಾಚಾರದಂತೆ ಶಾಸಕರ ಮುನಿರತ್ನಂ ಅವರನ್ನು ಕರೆದೇ ಇಲ್ಲ. ಸೋತವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಜನರಿಂದ ಆಯ್ಕೆಯಾದವರಿಗೆ ಮಾತ್ರವಲ್ಲ; ಮತ ನೀಡಿದ ಜನರಿಗೂ ಅವಮಾನ ಮಾಡಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ಮುನಿಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.