ಕೆಜಿಎಫ್: ಮೂರು ಆಂಬುಲೆನ್ಸ್‌ಗಳು ಇದ್ದರೂ ರೋಗಿಗಳ ಉಪಯೋಗಕ್ಕೆ ಬಂದಿಲ್ಲ ಎಂದು ದೂರಿ ಸಾರ್ವಜನಿಕರು ರಾಬರ್ಟಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು.
ನಗರದ ಓಲ್ಡ್ ಓರಿಯಂಟಲ್ ಲೈನ್ ನಿವಾಸಿ ರಾಜಾ (51) ಅವರು ಎದೆ ನೋವಿನಿಂದ ಮಧ್ಯಾಹ್ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಪರಿಸ್ಥಿತಿ ವಿಷಮವಾಗಿದ್ದನ್ನು ರೋಗಿ ಬಂಧುಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ರೋಗಿಯನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಕಳಿಸುವಂತೆ ರೋಗಿಗಳ ಸಂಬಂಧಿಗಳು ಒತ್ತಾಯ ಮಾಡಿದರು. ಆದರೆ, ಮೂರು ಆಂಬುಲೆನ್ಸ್ ಪೈಕಿ ಎರಡು ಆಂಬುಲೆನ್ಸ್ ರಿಪೇರಿಗಾಗಿ ಗ್ಯಾರೇಜ್‌ಗೆ ಹೋಗಿದ್ದವು. ಇನ್ನೊಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬೆಂಗಾವಲು ಪಡೆಯೊಂದಿಗೆ ಹೋಗಿತ್ತು. ಇದರಿಂದ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಲಭ್ಯತೆ ಇರಲಿಲ್ಲ. ಇದರಿಂದ ಕುಪಿತಗೊಂಡ ರೋಗಿ ಸಂಬಂಧಿಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
‘ಆಸ್ಪತ್ರೆಯಲ್ಲಿ ಹೃದಯಾಘಾತವಾದರೆ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ಸವಲತ್ತು ಒದಗಿಸಲಾಗಿದೆ ಎಂದು ಶಾಸಕಿ ಹೇಳುತ್ತಾರೆ. ಆದರೆ, ಯಾವುದೇ ಸೌಲಭ್ಯ ಇಲ್ಲ. ಸೌಲಭ್ಯ ಇದ್ದಿದ್ದರೆ ನನ್ನ ಭಾವ ಉಳಿದುಕೊಳ್ಳುತ್ತಿದ್ದರು’ ಎಂದು ರೋಗಿ ಸಂಬಂಧಿ ಬಾಬು ಅವಲತ್ತುಕೊಂಡರು.
ನಂತರ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್ ಕುಮಾರ್ ಪರಿಸ್ಥಿತಿಯನ್ನು ರೋಗಿ ಸಂಬಂಧಿಗಳಿಗೆ ವಿವರಿಸಿ, ಮೃತರ ಶವವನ್ನು ವಾರಸುದಾರರು ತೆಗೆದುಕೊಂಡು ಹೋಗುವಂತೆ ಮಾಡಿದರು. ಮೃತರಿಗೆ ಬೇಕಾದ ಎಲ್ಲ ತುರ್ತು ಚಿಕಿತ್ಸೆ ನೀಡಲಾಗಿತ್ತು. ಆದರೆ, ತೀವ್ರ ಸ್ವರೂಪದ ಹೃದಯಾಘಾತವಾದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಡಾ.ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.