ಕೋಲಾರದಲ್ಲಿ ಗುರುವಾರ ಮಾವಿಗೆ ಬೆಂಬಲ ನೀಡುವಂತೆ ಆಗ್ರಹಿಸಿ ರಸ್ತೆಗೆ ಮಾವು ಚೆಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು
ಕೋಲಾರ: ಮಾವು ಬೆಳೆಗಾರರನ್ನು ನಿರ್ಲಕ್ಷಿಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿ ಖಂಡಿಸಿ, ಮಾವಿನ ಪ್ರತಿ ಕೆ.ಜಿಗೆ ₹15 ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಸಿಪಿಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ನಗರದ ಹೊಸ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.
ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು ಸಾರ್ವಜನಿಕರಿಗೆ ಉಚಿತವಾಗಿ ಮಾವಿನ ಹಣ್ಣುಗಳನ್ನು ವಿತರಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ‘ನಮ್ಮನ್ನು ಆಳುವ ಸರ್ಕಾರಗಳ ರೈತ ವಿರೋಧಿ ಧೋರಣೆಗಳಿಂದಾಗಿ ಮಾವು ಬೆಳೆಗಾರರು ಇವತ್ತು ಬೀದಿಗೆ ಬಿದ್ದಿದ್ದಾರೆ. ಮಾವು ಬೆಳೆ ಕುಸಿತಕ್ಕೆ ಸಾಂದ್ರೀಕೃತ ಹಣ್ಣುಗಳ ರಸದ ಆಮದು ನೇರ ಕಾರಣವಾಗಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಜ್ಯೂಸ್ ಫ್ಯಾಕ್ಟರಿಗಳ ಮೇಲೆ ಅವಲಂಬನೆ ಆಗುವುದು ಬಿಟ್ಟು ನಮ್ಮದೇ ರಾಜ್ಯದಲ್ಲಿ ಜ್ಯೂಸ್ ಫ್ಯಾಕ್ಟರಿಗಳನ್ನು ಪ್ರಾರಂಭಿಸಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ಟನ್ ಮಾವಿಗೆ ₹15,000 ಸಿಗುವಂತೆ ಬೆಂಬಲ ಬೆಲೆ ಘೋಷಣೆ ಮಾಡಬೇಕು, ಸಹಕಾರಿ ರಂಗದ ಮೂಲಕ ಹಣ್ಣು ತಿರುಳು ಕೈಗಾರಿಕೆಯನ್ನು ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
‘ಶ್ರೀನಿವಾಸಪುರದಲ್ಲಿನ ಪ್ರಮುಖ ಮಾರುಕಟ್ಟೆ ಕೇಂದ್ರವು ಏಷ್ಯಾದಲ್ಲಿ ಮಾವಿಗೆ ಪ್ರಸಿದ್ಧಿ ಪಡೆದಿದೆ. ಆದರೆ, ಹವಾಮಾನ ವೈಪರೀತ್ಯಗಳಿಂದ ಸಾಕಷ್ಟು ಬೆಳೆ ನಷ್ಟ ಆಗಿದೆ. ಜೊತೆಗೆ ರೈತರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಮಾವಿನ ಕಾಯಿಗಳನ್ನು ತೋಟದಲ್ಲೇ ಬಿಡುವಂಥ ಪರಿಸ್ಥಿತಿ ಬಂದಿದ್ದು, ಕೂಡಲೇ ಸರ್ಕಾರ ಗಮನ ಹರಿಸಬೇಕು’ ಎಂದು ಕೋರಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ವಿ.ಗೀತಾ ಮಾತನಾಡಿ, ‘ಮಾವಿನ ಹಣ್ಣುಗಳಿಗೆ ಬೆಂಬಲ ಬೆಲೆ ಘೋಷಣೆಗೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು. ಜಿಲ್ಲೆಯಲ್ಲಿ ಕೃಷಿ ಆಧಾರಿತ ಹಾಗೂ ಹಣ್ಣುಗಳ ರಸ ತೆಗೆಯುವ ಕಾರ್ಖಾನೆಗಳು ಸ್ಥಾಪನೆ ಆಗಬೇಕು, ವಿದೇಶಗಳಿಂದ ನಮ್ಮ ದೇಶಕ್ಕೆ ಬರುವ ಸಾಂದ್ರೀಕೃತ ಹಣ್ಣುಗಳ ರಸ ಆಮದು ನಿಲ್ಲಿಸಬೇಕಿದ್ದು, ರೈತರ ಧ್ವನಿಯಾಗದ ಶಾಸಕರು, ಸಂಸದರ ವಿರುದ್ಧ ಪ್ರತಿಭಟನೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗಾಂಧಿನಗರ ನಾರಾಯಣಸ್ವಾಮಿ, ಟಿ.ಎಂ.ವೆಂಕಟೇಶ್, ಪಾತಕೋಟೆ ನವೀನ್ ಕುಮಾರ್, ತಂಗರಾಜ್, ಜಿಲ್ಲಾ ಸಮಿತಿ ಸದಸ್ಯರಾದ ವಿಜಯಕೃಷ್ಣ, ಅಪ್ಪಯ್ಯಣ್ಣ, ಜಯಲಕ್ಷ್ಮಿ, ಪಿ.ಶ್ರೀನಿವಾಸ್ ಮತ್ತು ಸಿಪಿಎಂ ಕಾರ್ಯಕರ್ತರು, ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.