ADVERTISEMENT

ಕೋಲಾರ: ‘ಪಿಎಸ್‌ಐ ಅಕ್ರಮ: ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ’

​ಪ್ರಜಾವಾಣಿ ವಾರ್ತೆ
Published 5 ಮೇ 2022, 16:32 IST
Last Updated 5 ಮೇ 2022, 16:32 IST

ಕೋಲಾರ: ‘ಪಿಎಸ್‌ಐ ನೇಮಕಾತಿ ಅಕ್ರಮದ ವಿಚಾರದಲ್ಲಿ ವಿರೋಧ ಪಕ್ಷದವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ನಡೆದಿರುವ ಅಕ್ರಮ ಬಗ್ಗೆ ಬಿಚ್ಚಿಡುತ್ತಿದ್ದೇವೆ. ಅಕ್ರಮ ನಡೆದಿಲ್ಲ ಎಂದಾದರೆ ಸರ್ಕಾರ ಆಯ್ಕೆಪಟ್ಟಿ ಏಕೆ ರದ್ದುಪಡಿಸಿತು?’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಿಎಸ್‌ಐ ಅಕ್ರಮದ ಬಗ್ಗೆ ಸರ್ಕಾರಕ್ಕೆ ಮೊದಲು ನಾನು ಪತ್ರ ಬರೆದಿಲ್ಲ. ಸರ್ಕಾರದ ಭಾಗವಾಗಿರುವ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರೇ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಪತ್ರ ಬರೆದವರು. ಈಗಿರುವಾಗ ಅಕ್ರಮ ನಡೆದಿಲ್ಲವೆಂದು ಸಮಜಾಯಿಷಿ ನೀಡುವುದರಲ್ಲಿ ಅರ್ಥವಿಲ್ಲ’ ಎಂದರು.

‘ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ‌ ನಡೆದಿರುವ ಕಾರಣಕ್ಕಾಗಿಯೇ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಅಕ್ರಮಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಜವಾಬ್ದಾರಿ. ಅವರು ಮಂತ್ರಿಯಾಗಿರುವುದಕ್ಕೆ ನಾಲಾಯಕ್‌. ನಮ್ಮ ಪಕ್ಷದ ಆಡಳಿತಾವಧಿಯಲ್ಲಿ ಅಕ್ರಮ ನಡೆದಿದ್ದರೆ ಈಗ ಬಿಜೆಪಿಯದೇ ಸರ್ಕಾರವಿದ್ದು, ತನಿಖೆ‌ ನಡೆಸಲಿ. ಅವರ ಕೈಯಲ್ಲೇ ಅಧಿಕಾರವಿದೆ’ ಎಂದು ಸವಾಲು ಹಾಕಿದರು.

ADVERTISEMENT

‘ಸಚಿವ ಮುನಿರತ್ನ ಅವರ ಸಿಲ್ಲಿ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ‌ಅವರ ರೀತಿ ಹಣ ತೆಗೆದುಕೊಂಡು ಬೇರೆ ಪಕ್ಷಕ್ಕೆ ಓಡಿ ಹೋಗುವುದಿಲ್ಲ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.