
ಬೇತಮಂಗಲ: ಸಮೀಪದ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೇತಮಂಗಲ ಪೊಲೀಸ್ ಠಾಣೆ ವತಿಯಿಂದ ಮಾದಕ ವಸ್ತುಗಳ ನಿರ್ಮೂಲನೆ ಹಾಗೂ ಪೋಕ್ಸೊ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ವೇಳೆ ಬೇತಮಂಗಲ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗುರುರಾಜ್ ಚಿಂತಕಲ್ ಮಾತನಾಡಿ, ಇಂದಿನ ಯುವ ಜನತೆ ಮಾದಕ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಸಣ್ಣ ಕುತೂಹಲಕ್ಕೆ ಶುರುವಾಗುವ ಕೆಟ್ಟ ಹವ್ಯಾಸಗಳು ಇಡೀ ಭವಿಷ್ಯವನ್ನೇ ನಾಶ ಮಾಡುತ್ತವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳ ನಡವಳಿಕೆಯ ಮೇಲೆ ನಿಗಾವಹಿಸಬೇಕು ಎಂದು ಹೇಳಿದರು.
ಅಪ್ರಾಪ್ತರ ಮೇಲೆ ನಡೆಯುವ ಯಾವುದೇ ರೀತಿಯ ಕಿರುಕುಳ ಅಥವಾ ಅಹಿತಕರ ಘಟನೆಗಳನ್ನು ಮಕ್ಕಳು ಮುಚ್ಚಿಡಬಾರದು. ನಿರ್ಭಯವಾಗಿ ಪೋಷಕರಿಗೆ ಅಥವಾ ಶಿಕ್ಷಕರಿಗೆ ತಿಳಿಸಬೇಕು ಅಥವಾ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದರು.
ಬಾಲ್ಯ ವಿವಾಹವು ಕಾನೂನುಬಾಹಿರ. ಇಂತಹ ಘಟನೆಗಳು ಕಂಡು ಬಂದಲ್ಲಿ ಸಹಾಯವಾಣಿ 1098 ಅಥವಾ 112ಕ್ಕೆ ಕರೆ ಮಾಡಿ ಎಂದು ಮಾಹಿತಿ ನೀಡಿದರು.
ಮುಖ್ಯೋಪಾಧ್ಯಾಯೆ ಎಂ.ವಿ.ಭಾರತಿ, ಶಿಕ್ಷಕರಾದ ರವಿ, ಗಂಗಾಧರ್, ವುಲಿಗಮ್ಮ ಹಾಗೂ ಶಾಲಾ ಶಿಕ್ಷಕ ವೃಂದ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.