ADVERTISEMENT

ಕೋಲಾರ: ಪಂಜಾಬ್‌ನಂತೆ ರಾಜ್ಯದಲ್ಲೂ ಬದಲಾವಣೆ:ಡಾ.ವೆಂಕಟೇಶ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:49 IST
Last Updated 29 ಜನವರಿ 2023, 5:49 IST
ಕೋಲಾರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮ್‌ ಆದ್ಮಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮ್‌ ಆದ್ಮಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು   

ಕೋಲಾರ: ‘ಕಾಂಗ್ರೆಸ್ ದುರಾಡಳಿತ ವಿರೋಧಿಸಿ ಬಿಜೆಪಿ ಸ್ಥಾಪನೆಯಾಯಿತು. ಆದರೆ, ಅವರಿಗಿಂತ ಹೆಚ್ಚು ದುರಾಡಳಿತವನ್ನು ಬಿಜೆಪಿ ನಡೆಸುತ್ತಿದೆ. ಎರಡೂ ಪಕ್ಷಗಳು ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಿ ಗೆಲ್ಲಲು ಮುಂದಾಗಿವೆ’ ಎಂದು ಮಾಜಿ ಸಂಸದ ಡಾ.ವೆಂಕಟೇಶ್ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಮ್ ಆದ್ಮಿ ಪಕ್ಷದ (ಆಪ್‌) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಂಜಾಬ್‌ ರಾಜ್ಯದಲ್ಲಿ ಬದಲಾವಣೆ ಗಮನಿಸಿ ಕರ್ನಾಟಕದಲ್ಲೂ ಬದಲಾವಣೆ ತರಲು ಜನರು ಮುಂದಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

‘ಬಹುಜನ ಚಳವಳಿ ಅಧ್ಯಕ್ಷ ಸಂಗಸಂದ್ರ ವಿಜಯ ಕುಮಾರ್ ನಮ್ಮ ಪಕ್ಷ ಸೇರುತ್ತಿದ್ದಾರೆ. ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಲಿದ್ದಾರೆ. ಸೇವೆ ಮಾಡಲು ರಾಜಕೀಯ ಮಾಡಬೇಕಾಗುತ್ತದೆ. ರಾಜಕೀಯಕ್ಕಾಗಿ ಸೇವೆ ಅಲ್ಲ’ ಎಂದು ತಿಳಿಸಿದರು.

ADVERTISEMENT

ಸಂಗಸಂದ್ರ ವಿಜಯಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ. ಎಲ್ಲ ಕಡೆ ಲಂಚ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಂಬರುವ ದಿನಗಳಲ್ಲಿ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸುವ ಜತೆಗೆ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ನಡೆಸುತ್ತೇವೆ’ ಎಂದರು.

ಆಮ್ ಆದ್ಮಿ ಮುಖಂಡ ಸುರೇಶ್ ಬಾಲಕೃಷ್ಣ ಮಾತನಾಡಿ, ‘ಜಿಲ್ಲೆಯಲ್ಲಿ ಸದ್ದಿಲ್ಲದೆ ಗ್ರಾಮ ಸಂಪರ್ಕ ಅಭಿಯಾನ ನಡೆಸುತ್ತಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ ವಿವಿಧ ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ಈವರೆಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಲವಾರು ಸೇವಾಕಾಂಕ್ಷಿಗಳು ಇದ್ದಾರೆ. ಶ್ರೀನಿವಾಸಪುರದಲ್ಲಿ ಡಾ.ವೆಂಕಟಚಲಾಪತಿ ಶಿಬಿರ ಮಾಡಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು.

‘ದಾವಣಗೆರೆಯಲ್ಲಿ ಫೆ.26ರಂದು ಮೆಗಾ ರ‍್ಯಾಲಿ ನಡೆಯಲಿದ್ದು, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪಾಲ್ಗೊಳ್ಳಲಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಹಲವರು ಆಪ್‌ ಪಕ್ಷ ಸೇರ್ಪಡೆಯಾದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ವಿನೋದ ಕುಮಾರ್, ರಮೇಶ್, ವಿಜಯಕುಮಾರ್, ಸುರೇಶ್, ಸತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.