ಕೋಲಾರ: ‘ಪ್ರತಿ ಕ್ವಿಂಟಾಲ್‌ಗೆ ₨ ೩,೧೫೦ರ ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಿಷ್ಟ ಬೆಂಬಲ ಬೆಲೆ ಸಭೆಯಲ್ಲಿ ಮಾತನಾಡಿ, ‘ ಸರ್ಕಾರ ರಾಗಿಗೆ ಬೆಂಬಲ ಬೆಲೆ ನಿಗದಿಪಡಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರಾಗಿ ಖರೀದಿ ಕೇಂದ್ರ ತೆರೆಯಬೇಕು’ ಎಂದು ಸೂಚಿಸಿದರು.
‘ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲಾಗುವುದು. ರಾಗಿ ಮಾರಾಟ ಮಾಡಲು ಇಚ್ಛಿಸುವ ರೈತರು ಎನ್ಐಸಿಯಿಂದ ಸಿದ್ಧಪಡಿಸಿರುವ ತಂತ್ರಾಂಶದಲ್ಲಿ ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಬೇಕು ಎಂದು ಸೂಚಿಸಿದರು.
‘2020ರ ಜನವರಿಯಿಂದ ೩ ತಿಂಗಳ ಕಾಲ ಖರೀದಿ ಕೇಂದ್ರಗಳಲ್ಲಿ ರಾಗಿಯನ್ನು ಖರೀದಿಸಲಾಗುವುದು. ಕಳೆದ ವರ್ಷ ₨ ೨,೮೯೭ ಬೆಂಬಲ ಬೆಲೆ ನೀಡಲಾಗಿತ್ತು. ಈ ಬಾರಿ ಉತ್ತಮ ಬೆಲೆಯನ್ನು ನೀಡಿ ಖರೀದಿಸಲಾಗುತ್ತಿದೆ. ಖರೀದಿಸಿದ ರಾಗಿಯನ್ನು ದಾಸ್ತಾನು ಮಳಿಗೆಗಳಲ್ಲಿ ವ್ಯವಸ್ಥಿತವಾಗಿ ಸಂರಕ್ಷಣೆ ಮಾಡಬೇಕು’ ಎಂದು ಹೇಳಿದರು.
‘ಈ ಭಾರಿ ಉತ್ತಮ ಬೆಳೆಯಾಗಿರುವುದರಿಂದ ೧ ಲಕ್ಷ ಕ್ವಿಂಟಾಲ್ ದಾಸ್ತಾನು ಶೇಖರಣೆಗೂಳ್ಳುವ ನಿರೀಕ್ಷೆ ಇದೆ. ಆದ್ದರಿಂದ ರೈತರಿಗೆ ರಾಗಿ ಖರೀದಿಯ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕು. ರೈತರಿಂದ ಮಾರಾಟ ಮಾಡಲು ಬಂದಂತಹ ಅರ್ಜಿಗಳನ್ನು ಅಂದೇ ನೋಂದಾಯಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೊ ರೈತರನ್ನು ಕಾಯಿಸಬಾರದು’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಇಲ್ಲಿಯವರೆಗೆ ಬರಪೀಡಿತ ಜಿಲ್ಲೆಯಾಗಿತ್ತು, ಕೆಸಿ ವ್ಯಾಲಿ ಯೋಜನೆಯ ನೀರು ಜಿಲ್ಲೆಯ ಕೆರೆಗಳಿಗೆ ಹರಿಸಿರುವುದರಿಂದ ರೈತರು ಭತ್ತ ಹಾಗೂ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ದಾಸ್ತಾನು ಮಳಿಗೆಗಳ ಕೊರತೆ ಇರುವುದರಿಂದ ಪ್ರತಿ ತಾಲ್ಲೂಕಿನಲ್ಲಿಯೂ ದಾಸ್ತಾನು ಮಳಿಗೆ ನಿರ್ಮಾಣ ಮಾಡಲು ದಸ್ತಾನು ಅಭಿವೃದ್ಧಿ ಮಂಡಳಿಯವರು ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳಿದರು.
‘ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆ ಸಿಬ್ಬಂದಿಯು ರಾಗಿಯನ್ನು ಪರೀಕ್ಷಿಸಿ ಗುಣಮಟ್ಟ ದೃಢೀಕರಿಸಿದ ನಂತರ ಖರೀದಿಸಬೇಕು. ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಬೇಕು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಉಪವಿಭಾಗಾಧಿಕಾರಿ ಸೋಮಶೇಖರ್, ಉಪ ಕಾರ್ಯದರ್ಶಿ ಸಂಜೀವಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.