ADVERTISEMENT

ಬಂಗಾರಪೇಟೆ: ಶೀಘ್ರ ಕುಡಿಯುವ ನೀರು ಪೂರೈಕೆ

ಯರಗೋಳ್ ಜಲಾಶಯ: ಕಾಮಗಾರಿ ಬಹುತೇಕ ಪೂರ್ಣ

ಕಾಂತರಾಜು ಸಿ. ಕನಕಪುರ
Published 19 ಫೆಬ್ರುವರಿ 2023, 4:02 IST
Last Updated 19 ಫೆಬ್ರುವರಿ 2023, 4:02 IST
ಬಂಗಾರಪೇಟೆ-–ಬೂದಿಕೋಟೆ ರಸ್ತೆಯ ಆನಂದಗಿರಿ ಬಳಿ ನಿರ್ಮಾಣಗೊಂಡಿರುವ ನೀರು ಶುದ್ಧೀಕರಣ ಘಟಕದ ಏರಿಯೇಟರ್
ಬಂಗಾರಪೇಟೆ-–ಬೂದಿಕೋಟೆ ರಸ್ತೆಯ ಆನಂದಗಿರಿ ಬಳಿ ನಿರ್ಮಾಣಗೊಂಡಿರುವ ನೀರು ಶುದ್ಧೀಕರಣ ಘಟಕದ ಏರಿಯೇಟರ್   

ಬಂಗಾರಪೇಟೆ: ತಾಲ್ಲೂಕಿನ ಯರಗೋಳ್ ಜಲಾಶಯದ ನೀರು ಸರಬರಾಜು ವ್ಯವಸ್ಥೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ದೇಶಿತ ನಗರ, ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.

ಕುಡಿಯುವ ನೀರಿಗೆ ಮೀಸಲಾದ ಜಿಲ್ಲೆಯ ಏಕೈಕ ಯೋಜನೆ ಇದಾಗಿದೆ. ಕೋಲಾರ, ಬಂಗಾರಪೇಟೆ, ಮಾಲೂರು ತಾಲ್ಲೂಕು ಒಳಗೊಂಡಂತೆ ಮಾರ್ಗಮಧ್ಯದ 45 ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಂಗಾರಪೇಟೆ-ಬೂದಿಕೋಟೆ ರಸ್ತೆಯ ಆನಂದಗಿರಿ ಬಳಿ 4.25 ಎಕರೆ ಜಾಗದಲ್ಲಿ ₹ 5 ಕೋಟಿ ವೆಚ್ಚದ ನೀರು ಶುದ್ಧೀಕರಣ ಘಟಕ ಸಜ್ಜುಗೊಂಡಿದೆ.

ಘಟಕದಲ್ಲಿ ಒಂದು ಏರಿಯೇಟರ್, ರಾಸಾಯನಿಕ ಪ್ರಕ್ರಿಯೆ ಮನೆ, ನೀರು ಶುದ್ಧೀಕರಣ ಮನೆ, 2 ಸಂಪು, 2 ಪಂಪ್‌ಹೌಸ್‌ ನಿರ್ಮಿಸಲಾಗಿದೆ. ನಿತ್ಯ 13 ಲಕ್ಷ ಲೀಟರ್ ನೀರು ಶುದ್ಧೀಕರಣ ಮಾಡುವ ಸಾಮರ್ಥ್ಯ ಹೊಂದಿದೆ. ನಿತ್ಯ ಶುದ್ಧೀಕರಿಸುವ ನೀರು ಉದ್ದೇಶಿತ ನಗರ, ಪಟ್ಟಣ, ಗ್ರಾಮಗಳಿಗೆ ಪೂರೈಕೆಯಾಗಲಿದೆ. ಕೋಲಾರಕ್ಕೆ ಸರಬರಾಜು ಆಗುವ ನೀರನ್ನು ಆ ನಗರದ ಸಮೀಪದಲ್ಲೇ ಶುದ್ಧೀಕರಿಸಲಾಗುತ್ತದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನೀರು ಸರಬರಾಜು ಮತ್ತು ಶುದ್ಧೀಕರಣ ಘಟಕಗಳ ಕಾಮಗಾರಿ ನಡೆಸುತ್ತಿದೆ.

ADVERTISEMENT

ಯರಗೋಳ್ ಡ್ಯಾಂನಿಂದ ಸುಮಾರು 25 ಕಿಲೋಮೀಟರ್ ದೂರದ ಈ ಶುದ್ಧೀಕರಣ ಘಟಕಕ್ಕೆ ನೀರನ್ನು ಪಂಪ್ ಮಾಡಲಾಗುತ್ತದೆ. ಅಲ್ಲಿಂದ ಕೋಲಾರಕ್ಕೆ ನಿತ್ಯ ತಲಾ 100 ಲೀಟರ್, ಬಂಗಾರಪೇಟೆ ಮತ್ತು ಮಾಲೂರಿಗೆ ನಿತ್ಯ ತಲಾ 70 ಲೀಟರ್, ಮಾರ್ಗಮಧ್ಯದ ಹಳ್ಳಿಗಳಿಗೆ ತಲಾ 40 ಲೀಟರ್ ಪೂರೈಕೆ ಮಾಡಲು ಉದ್ದೇಶಿಸಲಾಗಿದೆ.

‘ತಾಲ್ಲೂಕಿನ ಚಿಕ್ಕಅಂಕಂಡಹಳ್ಳಿ ಮತ್ತು ಕಾರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳಿಗೆ ಯರಗೋಳ್‌ ಜಲಾಶಯದ ನೀರಿನ ಭಾಗ್ಯ ಸಿಗಲಿದೆ. ತದನಂತರ ಡಿ.ಕೆ. ಹಳ್ಳಿ ಪಂಚಾಯಿತಿ, ಘಟ್ಟಕಾಮದೇನಹಳ್ಳಿ ಪಂಚಾಯಿತಿ, ಚಿನ್ನಕೋಟೆ ಪಂಚಾಯಿತಿಯ ಕೆಲವು ಗ್ರಾಮಗಳಿಗೆ ಸದರಿ ಯೋಜನೆಯನ್ನು ವಿಸ್ತರಿಸುವ ಉದ್ದೇಶವಿದೆ’ ಎನ್ನುತ್ತಾರೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ.

‘ಡ್ಯಾಂ ಭರ್ತಿಯಾದ ಬಳಿಕ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಕೊಳವೆಬಾವಿಗಳು ಸೇರಿದಂತೆ ಜಲಮೂಲಗಳು ಮರುಪೂರಣಗೊಂಡಿವೆ’ ಎನ್ನುತ್ತಾರೆ ಜಲಾಶಯದ ಪಕ್ಕದ ತಮಟಮಾಕನಹಳ್ಳಿ ರಾಜಪ್ಪ.

₹ 240 ಕೋಟಿ ವೆಚ್ಚ: ಯರಗೋಳ್ ಗ್ರಾಮದ ಬಳಿ ಹರಿಯುತ್ತಿರುವ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಯರಗೋಳ್ ಡ್ಯಾಂ ನಿರ್ಮಾಣಗೊಂಡಿದೆ.
₹ 160 ಕೋಟಿ ವೆಚ್ಚದಡಿ 500 ಎಂಸಿಎಫ್‌ಟಿ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಲಾಗಿದೆ.

ಪೈಪ್‌ಲೈನ್‌, ನೀರು ಶುದ್ಧೀಕರಣ ಘಟಕದ ಕಾಮಗಾರಿಗಳಿಗೆ ₹ 80 ಕೋಟಿ ಸೇರಿದಂತೆ ಒಟ್ಟು ₹ 240 ಕೋಟಿ ವೆಚ್ಚ ತಗುಲಿದೆ. ಅಣೆಕಟ್ಟು ನಿರ್ಮಿಸಿದ ಮೊದಲ ವರ್ಷದಲ್ಲಿಯೇ ಭರ್ತಿಯಾಗಿದ್ದು, ನೀರು ಸರಬರಾಜು ಪ್ರಕ್ರಿಯೆ ಭರದಲ್ಲಿ ಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.