ADVERTISEMENT

ರೈಲ್ವೆ ವರ್ಕ್‌ಶಾಪ್‌ ನಿರ್ಮಾಣಕ್ಕೆ ಒಪ್ಪಿಗೆ

ಜನವರಿಯಲ್ಲಿ ಯೋಜನೆಗೆ ಚಾಲನೆ: ಸಂಸದ ಮುನಿಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 14:56 IST
Last Updated 18 ಡಿಸೆಂಬರ್ 2019, 14:56 IST
ಎಸ್‌.ಮುನಿಸ್ವಾಮಿ
ಎಸ್‌.ಮುನಿಸ್ವಾಮಿ   

ಕೋಲಾರ: ‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ಕೋಚ್ ಕಾರ್ಖಾನೆಗೆ ಬದಲಾಗಿ 600 ಎಕರೆ ಪ್ರದೇಶದಲ್ಲಿ ರೈಲ್ವೆ ವರ್ಕ್‌ಶಾಪ್‌ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾಜಿ ಸಂಸದ ಮುನಿಯಪ್ಪ ಅವರು ರಾಜಕೀಯ ಲಾಭಕ್ಕಾಗಿ ಈ ಹಿಂದೆ ತರಾತುರಿಯಲ್ಲಿ ರೈಲ್ವೆ ಕೋಚ್ ಕಾರ್ಖಾನೆಗೆ ಶಂಕುಸ್ಥಾಪನೆ ಮಾಡಿಸಿದರು. ಕೋಚ್ ಕಾರ್ಖಾನೆ ಅಗತ್ಯವಿಲ್ಲದಿದ್ದ ಕಾರಣ ಯೋಜನೆ ನನೆಗುದಿಗೆ ಬಿದ್ದಿತ್ತು’ ಎಂದರು.

‘ರೈಲ್ವೆ ವರ್ಕ್‌ಶಾಪ್‌ ನಿರ್ಮಾಣಕ್ಕೆ ರೈಲ್ವೆ ಸಚಿವರು ಸಮ್ಮತಿಸಿದ್ದು, 2020ರ ಜನವರಿ ತಿಂಗಳಲ್ಲಿ ಯೋಜನೆಗೆ ಚಾಲನೆ ಸಿಗಲಿದೆ. ಕೆಜಿಎಫ್‌ನ ಚಿನ್ನದ ಗಣಿ ಪುನರಾರಂಭ ಮತ್ತು ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಸಂಬಂಧ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

‘ವಿಧಾನಸಭಾ ಉಪಚುನಾವಣೆ ನೀತಿಸಂಹಿತೆ ಕಾರಣಕ್ಕೆ ಹೊಸ ರೈಲು ಸೇವೆ ಆರಂಭ ತಡವಾಗಿದ್ದು, ಡಿ.23ರಂದು ಬೆಳಿಗ್ಗೆ 7.30ಕ್ಕೆ ಕೋಲಾರದಿಂದಲೇ ಹೊಸ ರೈಲಿಗೆ ಚಾಲನೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಈ ಹಿಂದೆ 28 ವರ್ಷ ಸಂಸದರಾಗಿ ಆಡಳಿತ ನಡೆಸಿದವರೊಂದಿಗೆ ನನ್ನನ್ನು ಹೋಲಿಸಬೇಡಿ’ ಎಂದರು.

‘ನನ್ನ ಪರಿಶ್ರಮದಿಂದ 2 ಹೊಸ ರೈಲು ಸೇವೆ ಆರಂಭವಾಗಿದೆ. ಕೆಜಿಎಫ್‌ನಿಂದ -ಮಾರಿಕುಪ್ಪಂವರೆಗೆ ಜೋಡಿ ಹಳಿ (ಟ್ರ್ಯಾಕ್) ಮಾಡುವ ಯೋಜನೆ ಮುಂದುವರಿದಿದೆ, ಬಂಗಾರಪೇಟೆ, ಕೋಲಾರ, ಶ್ರೀನಿವಾಸಪುರ ಮಾರ್ಗದಲ್ಲಿ ಡಬಲ್ ಟ್ರ್ಯಾಕ್ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಮೇಲ್ದರ್ಜೆಗೆ ಒಪ್ಪಿಗೆ: ‘ಬಂಗಾರಪೇಟೆ ರೈಲು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಒಪ್ಪಿಗೆ ಸಿಕ್ಕಿದೆ. ಜಿಲ್ಲೆಯ ರೈಲು ನಿಲ್ದಾಣಗಳಿಗೆ ಮೂಲಸೌಕರ್ಯ ಒದಗಿಸಲು ಒತ್ತಡ ತಂದು ಕ್ರಮ ವಹಿಸಲಾಗಿದೆ. ಚಿನ್ನದ ಗಣಿ ಸಂಬಂಧ ಕೇಂದ್ರ ಗಣಿ ಸಮಿತಿಯಲ್ಲಿ ನಾನೂ ಸದಸ್ಯನಾಗಿದ್ದು, ಸಮಿತಿ ಅಧ್ಯಕ್ಷ ರಾಕೇಶ್‌ಸಿಂಗ್ ಅಧ್ಯಕ್ಷತೆಯಲ್ಲಿ ಕೇಂದ್ರ ಗಣಿ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ’ ಎಂದು ವಿವರಿಸಿದರು.

‘ಬರಪೀಡಿತ ಕೋಲಾರ ಜಿಲ್ಲೆಗೆ ಕೃಷ್ಣಾ ನದಿ ಅಥವಾ ಬೇರೆ ಮೂಲದಿಂದ ನೀರಾವರಿ ಸೌಕರ್ಯ ಕಲ್ಪಿಸಲು ಕೇಂದ್ರ ನೀರಾವರಿ ಸಚಿವ ಗಜೇಂದ್ರ ಶೇಖಾವತ್ ಅವರು ರಾಜ್ಯ ಸರ್ಕಾರದಿಂದ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಢ್ಲಘಟ್ಟದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಹೇಳಿದರು.

ಕೆರೆ ಸ್ವಚ್ಛತೆ: ‘ಗುರುವಾರದಿಂದ (ಡಿ.19) ಕೋಲಾರಮ್ಮ ಅಮಾನಿ ಕೆರೆ ಸ್ವಚ್ಛತಾ ಕಾರ್ಯ ಆರಂಭವಾಗಲಿದೆ. ಕೆರೆ ದಂಡೆಯಲ್ಲಿ ನಡಿಗೆ ಪಥ, ಮಕ್ಕಳ ಉದ್ಯಾನ ನಿರ್ಮಿಸಲಾಗುತ್ತದೆ. ಕೋಲಾರದಲ್ಲಿ ಟೊಮೆಟೊ ಮಾರುಕಟ್ಟೆಗೆ 30 ಎಕರೆ ಜಾಗ ನೀಡುವ ಕುರಿತು ಸ್ಥಳ ಪರಿಶೀಲನೆ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕಂದಾಯ ಸಚಿವರನ್ನು ಭೇಟಿಯಾಗಿ ಜಮೀನು ಮಂಜೂರು ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಅಧಿಕಾರಿಗಳು ಸರ್ಕಾರಿ ಜಾಗ ಒತ್ತುವರಿ ಮಾಡುವ ಭೂಗಳ್ಳರಿಗೆ ನೆರವಾಗಿ ನಕಲಿ ದಾಖಲೆಪತ್ರ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ. ಪಕ್ಷಾತೀತವಾಗಿ ಎಲ್ಲಾ ಶಾಸಕರ ಸಭೆ ನಡೆಸಿ ಸರ್ಕಾರಿ ಜಾಗ ಒತ್ತುವರಿ ತೆರವು, ಅಂತರಗಂಗೆ ರಸ್ತೆ ಅಭಿವೃದ್ಧಿ ಸೇರಿದಂತೆ ಜಿಲ್ಲಾ ಕೇಂದ್ರವನ್ನು ಮಾದರಿಯಾಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ವಿಜಯ್‌ಕುಮಾರ್, ಮಮತಾ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ವೆಂಕಟೇಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮರಾಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.