ADVERTISEMENT

ಮಳೆ: ಕೃಷಿ ಚಟುವಟಿಕೆ ಬಿರುಸು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:46 IST
Last Updated 8 ಅಕ್ಟೋಬರ್ 2019, 13:46 IST

ಕೋಲಾರ: ಸತತ ಬರಗಾಲದಿಂದ ತತ್ತರಿಸಿ ಹೋಗಿದ್ದ ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳು ಚೇತರಿಸಿಕೊಂಡಿದ್ದು ರೈತರ ಮುಖದಲ್ಲಿ ಮಂದಹಾಸ ಮಿನುಗುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆ ಅಗದ ಕಾರಣ ಪೂರ್ಣ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಬಿತ್ತನೆಯಾಗಿರುವ ಬೆಳೆಯೂ ಒಣಗುತ್ತಿದ್ದುದರಿಂದ ರೈತರು ಆತಂಕಕ್ಕೆ ಒಳಗಾಗುತ್ತಿದ್ದರು. ಸತತವಾಗಿ ಮೂರು ವಾರದಿಂದ ಮಳೆ ಸುರಿಯುತ್ತಿದ್ದು ಮಳೆಗೆ ಕೆರೆ, ಕುಂಟೆಗಳಿಗೂ ಅಲ್ಪ-ಸ್ವಲ್ಪ ನೀರು ಬಂದಿದೆ. ಚೆಕ್ ಡ್ಯಾಂಗಳು ಭರ್ತಿಯಾಗಿರುವುದರಿಂದ ಅಂತರ್ಜಲಮಟ್ಟ ವೃದ್ಧಿಯಾಗುವ ನಿರೀಕ್ಷೆಯಿದೆ.

ವಾರ್ಷಿಕವಾಗಿ ಜಿಲ್ಲೆಯಲ್ಲಿ 727 ಮಿ.ಮೀ ವಾಡಿಕೆ ಮಳೆಯಾಗಬೇಕಾಗಿದ್ದು, ಶೇ.45ರಷ್ಟು ಮಳೆಯಾಗಿದೆ. ಜುಲೈ, ಆಗಸ್ಟ್ ಮಾಹೆಯಲ್ಲಿ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಅಲ್ಪ-ಸ್ವಲ್ಪ ಮಳೆಗೆ ಎರಡು-ಮೂರು ಹಂತಗಳಲ್ಲಿ ಬಿತ್ತನೆಯಾಗಿತ್ತು. ಸೆಪ್ಟೆಂಬರ್ ಹಾಗು ಅಕ್ಟೋಬರ್ ಮಾಹೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ADVERTISEMENT

ಜಿಲ್ಲಿಯಲ್ಲಿ ಒಟ್ಟು 2,082 ಹೆಕ್ಟೇರ್‌ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಮಾಡಿದ್ದು, ಬಂಗಾರಪೇಟೆ ತಾಲ್ಲೂಕಿನಲ್ಲಿ ಶೇ 4.02, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಶೇ.0.64, ಕೋಲಾರ ತಾಲ್ಲೂಕಿನಲ್ಲಿ ಶೇ 2.73, ಮಾಲೂರು ತಾಲ್ಲೂಕಿನಲ್ಲಿ ಶೇ 1.11 ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಶೇ 1.57ರಷ್ಟು ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ರಾಗಿ, ತೊಗರಿ, ನೆಲಗಡಲೆ ಪ್ರಮುಖ ಬೆಳೆಗಳಾಗಿವೆ. ತಡವಾಗಿ ಬಿತ್ತನೆಯಾಗಿರುವ ಪ್ರದೇಶದಲ್ಲಿ ಗುಂಟಿವೆ ಹಾಕುವುದು, ಖಾಲಿ ಜಾಗಗಳಲ್ಲಿ ಪೈರು ನಾಟಿ ಮಾಡುವುದು, ಕಳೆ ಕೀಳುವ ಕೆಲಸಗಳಲ್ಲಿ ರೈತರು ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.