ADVERTISEMENT

ಕೋಲಾರ: ರೈತರಿಗೆ ಕಣ್ಣೀರು ತರಿಸಿದ ಮಳೆರಾಯ

ಜಿಲ್ಲೆಯಲ್ಲಿ ಮುಂದುವರಿದ ವರುಣನ ಅಬ್ಬರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 14:32 IST
Last Updated 23 ಏಪ್ರಿಲ್ 2019, 14:32 IST
ಬಿರುಗಾಳಿ ಸಹಿತ ಮಳೆಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಸೋಮವಾರ ರಾತ್ರಿ ಉದುರಿರುವ ಮಾವಿನ ಕಾಯಿಗಳನ್ನು ಪೆಟ್ಟಿಗೆಗೆ ತುಂಬಿಸಿರುವುದು.
ಬಿರುಗಾಳಿ ಸಹಿತ ಮಳೆಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೈತರೊಬ್ಬರ ಜಮೀನಿನಲ್ಲಿ ಸೋಮವಾರ ರಾತ್ರಿ ಉದುರಿರುವ ಮಾವಿನ ಕಾಯಿಗಳನ್ನು ಪೆಟ್ಟಿಗೆಗೆ ತುಂಬಿಸಿರುವುದು.   

ಕೋಲಾರ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಸೋಮವಾರ ರಾತ್ರಿ ಬಿರುಗಾಳಿ ಸಹಿತ ಸುರಿದು ಧಾರಾಕಾರ ಮಳೆಗೆ ಹಲವೆಡೆ ಮನೆಗಳು ಕುಸಿದಿವೆ. ಮಳೆಯಿಂದಾಗಿ ತಗ್ಗು ಪ್ರದೇಶದ ಜನರ ಬದುಕು ನೀರು ಪಾಲಾಗಿದೆ.

ಆಕಾಶಕ್ಕೆ ತೂತು ಬಿದ್ದಂತೆ ರಾತ್ರಿ ಒಂದೂವರೆ ತಾಸು ಎಡಬಿಡದೆ ಸುರಿದ ಮಳೆರಾಯ ಮಾವು ಬೆಳೆಗಾರರಿಗೆ ಕಣ್ಣೀರು ತರಿಸಿದ್ದಾನೆ. ಒಂದೇ ರಾತ್ರಿಗೆ 1,832 ಹೆಕ್ಟೇರ್‌ ಬೆಳೆ ನಾಶವಾಗಿದೆ. ಬೆಳೆ ನಷ್ಟದ ಪ್ರಮಾಣ ₹ 7.50 ಕೋಟಿ ಎಂದು ಅಂದಾಜಿಸಲಾಗಿದೆ.

ಶ್ರೀನಿವಾಸಪುರ ಹಾಗೂ ಕೋಲಾರ ತಾಲ್ಲೂಕಿನಲ್ಲಿ ಪಪ್ಪಾಯ (ಪರಂಗಿ), ಬಾಳೆ ಗಿಡಗಳು ಸಂಪೂರ್ಣ ನೆಲಕಚ್ಚಿವೆ. ಮಾವಿನ ಕಾಯಿ ರಾಶಿ ರಾಶಿಯಾಗಿ ಉದುರಿವೆ. ಮತ್ತೊಂದಡೆ ಮರದ ಕೊಂಬೆಗಳು ತುಂಡಾಗಿ ಬಿದ್ದಿವೆ. ಮಾವಿನ ತೋಪುಗಳಲ್ಲಿ ಮರದ ಕೆಳಗೆ ಕಾಯಿಗಳು ರಾಶಿಯಾಗಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ.

ADVERTISEMENT

ಶ್ರೀನಿವಾಸಪುರ ತಾಲ್ಲೂಕು ಒಂದರಲ್ಲೇ 1,772 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಪ್ರಮುಖವಾಗಿ 1,700 ಹೆಕ್ಟೇರ್‌ ಮಾವು ಬೆಳೆ ನಾಶವಾಗಿದೆ. ಕೋಲಾರ ತಾಲ್ಲೂಕಿನಲ್ಲಿ 60 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಟೊಮೆಟೊ, ಕೋಸು, ಬೀನ್ಸ್‌, ಕಲ್ಲಂಗಡಿ, ದಪ್ಪ ಮೆಣಸಿನಕಾಯಿ ಬೆಳೆ ನಾಶವಾಗಿದೆ.

ಶ್ರೀನಿವಾಸಪುರ ತಾಲ್ಲೂಕಿನ ತಂಬಿಹಳ್ಳಿ, ದಳಸನೂರು, ಹರಳಕುಂಟೆ, ಮುತ್ತಕಪಲ್ಲಿ, ಅತ್ತಿಕುಂಟೆ, ರೋಜರಪಲ್ಲಿ, ಗಾಂಡ್ಲಹಳ್ಳಿ, ಗಟ್ಟಳ್ಳಿ, ಬಂಗವಾದಿ, ಹೂಹಳ್ಳಿ, ಕಾಡು ದೇವಂಡಹಳ್ಳಿ, ಮಾಸ್ತೇನಹಳ್ಳಿ, ಯದರೂರು, ಆಚಂಪಲ್ಲಿ, ಯಲ್ದೂರು, ಹೊಸಹಳ್ಳಿ, ಸೀಗೆಹಳ್ಳಿ, ಶೆಟ್ಟಿಹಳ್ಳಿ, ಹನುಮಕುಂಟೆ, ಹೊಗಳಗೆರೆ, ಕೋಲಾರ ತಾಲ್ಲೂಕಿನ ಸುಗಟೂರು, ಜನ್ನಘಟ್ಟ, ತೊರದೇವಂಡಹಳ್ಳಿ, ಮಾದಮಂಗಲ, ಚಿಟ್ನಹಳ್ಳಿ, ಮಲ್ಲಸಂದ್ರ, ಮುದುವಾಡಿ, ಹುತ್ತೂರು, ವಕ್ಕಲೇರಿ, ಮದನಹಳ್ಳಿ ಸೇರಿದಂತೆ ಸಾಕಷ್ಟು ಕಡೆ ಬೆಳೆ ನೆಲಕಚ್ಚಿದೆ.

ಪರಿಶೀಲನೆ: ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಾಶವಾಗಿರುವ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರನ್ನು ಭೇಟಿಯಾದ ಅಧಿಕಾರಿಗಳು ಬೆಳೆಗೆ ಮಾಡಿದ್ದ ಖರ್ಚು ಮತ್ತು ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ಕಲೆ ಹಾಕಿದರು.

ಬರ ಪರಿಸ್ಥಿತಿ ನಡುವೆಯೂ ರೈತರು ಟ್ಯಾಂಕರ್‌ ಮತ್ತು ಕೃಷಿ ಹೊಂಡದ ನೀರು ಬಳಸಿಕೊಂಡು ಬೆಳೆ ಬೆಳೆದಿದ್ದರು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಆಘಾತ ನೀಡಿದೆ. ಬರದಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಈಗ ಮಳೆಯಿಂದ ಬೆಳೆ ಕಳೆದುಕೊಂಡು ಅಧಿಕಾರಿಗಳ ಎದುರು ಕಣ್ಣೀರಿಟ್ಟರು.

ನೀರು ಪಾಲು: ಕೆಜಿಎಫ್‌ ತಾಲ್ಲೂಕಿನಲ್ಲಿ 4 ಮನೆ, 1 ಕೊಟ್ಟಿಗೆ ಹಾಗೂ ರೇಷ್ಮೆ ಹುಳು ಸಾಕಣೆ ಮನೆ ಕುಸಿದಿದೆ. ಜಿಲ್ಲಾ ಕೇಂದ್ರದ ರಹಮತ್‌ನಗರ ಹಾಗೂ ರಾಜಾನಗರದಲ್ಲಿ ಹಲವು ಮನೆಗಳ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಮೋಟರ್‌ನಂತಹ ವಿದ್ಯುತ್‌ ಉಪಕರಣಗಳಿಗೆ ಹಾನಿಯಾಗಿದೆ. ಬಟ್ಟೆ, ಹಾಸಿಗೆ, ಅಕ್ಕಿ, ರಾಗಿ, ಬೇಳೆ ಕಾಳು ಮೂಟೆಗಳು ನೀರು ಪಾಲಾಗಿವೆ. ಮಳೆಯಿಂದ ರಾತ್ರಿಯಿಡೀ ಜಾಗರಣೆ ಮಾಡಿದ್ದ ನಿವಾಸಿಗಳಿಗೆ ಮಂಗಳವಾರ ಮಳೆ ನೀರನ್ನು ಮನೆಯಿಂದ ಹೊರ ಹಾಕುವುದೇ ಕೆಲಸವಾಯಿತು.

ರಾಡಿಯಾದ ರಸ್ತೆಗಳು: ಮಹಾ ಮಳೆಗೆ ರಸ್ತೆಗಳ ಚಿತ್ರಣವೇ ಬದಲಾಗಿದೆ. ರಹಮತ್‌ನಗರ ಹಿಂದೂ ರುದ್ರಭೂಮಿ ಪಕ್ಕದ ರಸ್ತೆ, ಪಾಲಸಂದ್ರ ಲೇಔಟ್‌, ರಾಜಾನಗರ, ಕೇಶವನಗರ, ಶಾಂತಿನಗರದಲ್ಲಿನ ರಸ್ತೆಗಳು ಗುಂಡಿ ಬಿದ್ದಿವೆ. ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು ರಾಡಿಯಾಗಿವೆ. ಉದ್ಯಾನಗಳು ಕೆಸರು ಗದ್ದೆಯಂತಾಗಿವೆ. ಚನ್ನಯ್ಯ ಸಂತೆ ಮೈದಾನ, ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನೀರು ಕೆರೆಯಂತೆ ನಿಂತಿದೆ.

ವಿದ್ಯುತ್‌ ಕಡಿತ: ಗಾಳಿಯ ತೀವ್ರತೆಗೆ ಜಿಲ್ಲೆಯಾದ್ಯಂತ ಸುಮಾರು 130 ಮರಗಳು ಧರೆಗುರುಳಿವೆ. 100ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು, ವಿದ್ಯುತ್‌ ತಂತಿಗಳು ತುಂಡಾಗಿವೆ. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಾತ್ರಿಯಿಡೀ ವಿದ್ಯುತ್‌ ಸೇವೆ ಕಡಿತಗೊಂಡಿತು. ಹಲವೆಡೆ ಮಂಗಳವಾರ ಸಂಜೆವರೆಗೂ ವಿದ್ಯುತ್‌ ಪೂರೈಕೆಯಾಗಿಲ್ಲ.

ಹಲವೆಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದು ಬೈಕ್‌ಗಳು ಜಖಂಗೊಂಡಿವೆ ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಬೆಸ್ಕಾಂ ಸಿಬ್ಬಂದಿ ಹೊಸ ಕಂಬ ಹಾಗೂ ವಿದ್ಯುತ್ ತಂತಿ ಅಳವಡಿಕೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದರು. ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿಯು ರಸ್ತೆಗೆ ಉರುಳಿ ಬಿದ್ದಿದ್ದ ಮರಗಳನ್ನು ತುಂಡರಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಅಂಕಿ ಅಂಶ.....
* 1,832 ಹೆಕ್ಟೇರ್‌ ಬೆಳೆ ನಾಶ
* ₹ 7.50 ಕೋಟಿ ನಷ್ಟದ ಅಂದಾಜು
* 1,700 ಹೆಕ್ಟೇರ್‌ ಮಾವು ನಷ್ಟ
* 4 ಮನೆಗಳು ಕುಸಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.