ADVERTISEMENT

ಶ್ರೀನಿವಾಸಪುರದಲ್ಲಿ ಮಳೆ ಅಬ್ಬರ ಜೋರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 13:50 IST
Last Updated 4 ಸೆಪ್ಟೆಂಬರ್ 2023, 13:50 IST
ಶ್ರೀನಿವಾಸಪುರದ ಎಂಜಿ ರಸ್ತೆಯಲ್ಲಿ ಸೋಮವಾರ ಮಹಿಳೆಯೊಬ್ಬರು ಮಳೆಯಲ್ಲಿ ಮಗುವನ್ನು ಕಂಕುಳಲ್ಲಿ ಹೊತ್ತು ಕೊಡೆ ಹಿಡಿದು ನಡೆದು ಹೋಗುತ್ತಿರುವುದು
ಶ್ರೀನಿವಾಸಪುರದ ಎಂಜಿ ರಸ್ತೆಯಲ್ಲಿ ಸೋಮವಾರ ಮಹಿಳೆಯೊಬ್ಬರು ಮಳೆಯಲ್ಲಿ ಮಗುವನ್ನು ಕಂಕುಳಲ್ಲಿ ಹೊತ್ತು ಕೊಡೆ ಹಿಡಿದು ನಡೆದು ಹೋಗುತ್ತಿರುವುದು   

ಶ್ರೀನಿವಾಸಪುರ: ಪಟ್ಟಣದ ಸುತ್ತಮುತ್ತ ಸೋಮವಾರ ಜೋರು ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇತ್ತಾದರೂ, ಮಳೆ ಬರುವ ನಿರೀಕ್ಷೆ ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಆಕಾಶದಲ್ಲಿ ಮಳೆ ಮೋಡಗಳು ದಟ್ಟವಾಗಿ ಧೋ ಎಂದು ಮಳೆ ಸುರಿಯಿತು.

ಮೂರು ದಿನ ಮಳೆ ಸುರಿದ ಬಳಿಕ, ಭಾನುವಾರ ಮಳೆ ಬಿಡುವು ನೀಡಿತ್ತು. ರೈತರು ಸೋಮವಾರ ಬೆಳಿಗ್ಗೆಯಿಂದ ಹೊಲಗಳಲ್ಲಿ ಅಂತರ ಬೇಸಾಯ ಮಾಡುವಲ್ಲಿ ನಿರತರಾಗಿದ್ದರು. ರಾಗಿ ಹೊಲದಲ್ಲಿ ತೆರವು ತುಂಬುವುದು, ಕಳೆ ತೆಗೆಯುವುದು ಮುಂತಾದ ಕೆಲಸ ಮಾಡುತ್ತಿದ್ದರು. ಜೋರು ಮಳೆ ಸುರಿದ ಪರಿಣಾಮವಾಗಿ ಕೆಲಸ ಸ್ಥಗಿತಗೊಳಿಸಿ ಮನೆಗಳಿಗೆ ಹಿಂದಿರುಗಿದರು. ದನಗಾಹಿಗಳು ಮಳೆಯಲ್ಲಿ ನೆನೆದು ಜಾನುವಾರುಗಳೊಂದಿಗೆ ಗ್ರಾಮಗಳಿಗೆ ಹಿಂದಿರುಗಿದರು.

ಮಳೆ ಸುರಿಯುತ್ತಿದ್ದಂತೆ ಶಾಲೆಗಳನ್ನು ಬಿಟ್ಟ ಪರಿಣಾಮವಾಗಿ ವಿದ್ಯಾರ್ಥಿಗಳು ಮಳೆಯಲ್ಲಿಯೇ ಮನೆಗಳ ಕಡೆ ಹೆಜ್ಜೆ ಹಾಕಿದರು. ಶಾಲಾ ಬಸ್‌ಗಳಲ್ಲಿ ಬಂದ ವಿದ್ಯಾರ್ಥಿಗಳನ್ನು ಪೋಷಕರು ಕೊಡೆ ಕೆಳಗೆ ಮನೆಗಳಿಗೆ ಕರೆದೊಯ್ಯುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.

ADVERTISEMENT

ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ನಾಗರಿಕ ಸಂಚಾರಕ್ಕೆ ತೊಂದರೆ ಉಂಟಾಯಿತು. ಪವನ್ ಆಸ್ಪತ್ರೆ ಸಮೀಪ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ನೀರು ನಿಂತು ವಾಹನ ಚಾಲಕರು ಪರದಾಡಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.