ADVERTISEMENT

ಪೌರ ಕಾರ್ಮಿಕರ ಶ್ರಮ ನಿರ್ಣಾಯಕ

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 14:04 IST
Last Updated 9 ಏಪ್ರಿಲ್ 2020, 14:04 IST
ಕೋಲಾರ ನಗರಸಭೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಮಾತನಾಡಿದರು.
ಕೋಲಾರ ನಗರಸಭೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಮಾತನಾಡಿದರು.   

ಕೋಲಾರ: ‘ನಗರವನ್ನು ಕಸಮುಕ್ತ ನಗರವಾಗಿ ಮಾಡುವ ದಿಸೆಯಲ್ಲಿ ಪೌರ ಕಾರ್ಮಿಕರ ಶ್ರಮ ನಿರ್ಣಾಯಕ’ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಕಸದ ಸಮಸ್ಯೆ ಸಂಬಂಧ ನಗರಸಭೆಯಲ್ಲಿ ಗುರುವಾರ ನಡೆದ ಪೌರ ಕಾರ್ಮಿಕರ ಸಭೆಯಲ್ಲಿ ಮಾತನಾಡಿ, ‘ಪೌರ ಕಾರ್ಮಿಕರು ನಗರದ ಸ್ವಚ್ಛತೆಯ ಜತೆಗೆ ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಸರ್ಕಾರ ಸೂಚಿಸಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಪೌರ ಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ನಗರವನ್ನು ಸ್ವಚ್ಛವಾಗಿಡಲು ಸಾಧ್ಯ. ಪೌರ ಕಾರ್ಮಿಕರು ನಿಯಮಿತವಾಗಿ ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಗೊಳಿಸಿಕೊಳ್ಳಬೇಕು ಮತ್ತು ಮುಖಗವಸು ಧರಿಸಬೇಕು’ ಎಂದು ತಿಳಿಸಿದರು.

ADVERTISEMENT

‘ನಗರಸಭೆಯಲ್ಲಿ ಕೆಲಸ ಮಾಡುವ ಪ್ರತಿ ಸಿಬ್ಬಂದಿಯು ಮುಖಗವಸು ಹಾಕಿಕೊಳ್ಳಬೇಕು. ಪೌರ ಕಾರ್ಮಿಕರು ಜನರ ಮನೆಗಳ ಬಳಿಯೇ ಹಸಿ ಮತ್ತು ಒಣ ಕಸ ವಿಂಗಡಿಸಿ ಸಂಗ್ರಹಿಸಬೇಕು. ಕಸ ವಿಂಗಡಣೆ ಬಗ್ಗೆ ನಗರವಾಸಿಗಳಿಗೆ ಜಾಗೃತಿ ಮೂಡಿಸಬೇಕು. ನಗರದ ಕಸ ವಿಲೇವಾರಿಗೆ ಜಾಗದ ಸಮಸ್ಯೆಯಿದ್ದು, ಜಿಲ್ಲಾಡಳಿತ ಸದ್ಯದಲ್ಲೇ ಜಾಗ ಮಂಜೂರು ಮಾಡಲಿದೆ’ ಎಂದರು.

ವಿಮೆ ಮಾಡಿಸಿ: ‘ಪೌರ ಕಾರ್ಮಿಕರ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಪೌರ ಕಾರ್ಮಿಕರು ಹೆಚ್ಚು ಜವಾಬ್ದಾರಿಯುತವಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸಬೇಕು. ಕೋಲಾರವನ್ನು ಆರೋಗ್ಯವಂತ ನಗರವಾಗಿ ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸ್ವಚ್ಛತಾ ಕೆಲಸದ ನಿರ್ವಹಣೆಗೆ ಮೂಲಸೌಕರ್ಯಗಳ ಕೊರತೆಯಿದೆ. ತಳ್ಳುವ ಗಾಡಿ, ಮೂರು ಚಕ್ರದ ವಾಹನ ಮತ್ತು ಗೋಣಿ ಚೀಲಗಳ ವ್ಯವಸ್ಥೆ ಮಾಡಬೇಕು. ಹೋಟೆಲ್‌ಗಳ ಬಂದ್ ಆಗಿರುವುದರಿಂದ ಕೆಲಸದ ಸಂದರ್ಭದಲ್ಲಿ ಊಟ, ತಿಂಡಿ ಸಿಗುತ್ತಿಲ್ಲ. ಆದ ಕಾರಣ ಆಹಾರದ ವ್ಯವಸ್ಥೆ ಮಾಡಬೇಕು’ ಎಂದು ಪೌರ ಕಾರ್ಮಿಕರು ಕೋರಿದರು.

ನಗರಸಭೆ ಆಯುಕ್ತ ಶ್ರೀಕಾಂತ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಮೂರ್ತಿ, ವ್ಯವಸ್ಥಾಪಕ ಮಂಜುನಾಥ್, ಪರಿಸರ ವಿಭಾಗದ ಎಂಜಿನಿಯರ್‌ ಪುನೀತ್‌, ಆರೋಗ್ಯ ನೀರಿಕ್ಷಕಿ ಮರಿಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.