ADVERTISEMENT

ಬಂಗಾರಪೇಟೆ | ಮಳೆ ಬಂದರೆ ಕೆರೆ–ಕುಂಟೆಯಾಗುವ ರೈಲ್ವೆ ಕೆಳಸೇತುವೆ

ಬಂಗಾರಪೇಟೆಯಲ್ಲಿ ರೈತ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:42 IST
Last Updated 24 ಮೇ 2025, 14:42 IST
ಬಂಗಾರಪೇಟೆ ರೈಲು ನಿಲ್ದಾಣ ಮುಂಭಾಗದಲ್ಲಿ ರೈತ ಸಂಘದ ಸದಸ್ಯರಿಂದ ಪ್ರತಿಭಟನೆ
ಬಂಗಾರಪೇಟೆ ರೈಲು ನಿಲ್ದಾಣ ಮುಂಭಾಗದಲ್ಲಿ ರೈತ ಸಂಘದ ಸದಸ್ಯರಿಂದ ಪ್ರತಿಭಟನೆ   

ಬಂಗಾರಪೇಟೆ: ರೈಲ್ವೇ ಕೆಳಸೇತುವೆಗಳು ಅವೈಜ್ಞಾನಿಕವಾಗಿದ್ದು, ಮಳೆ ಬಂದರೆ ಕೆರೆ, ಕುಂಟೆಯಾಗಿ ಬದಲಾಗುತ್ತಿವೆ. ಇದರಿಂದ ಸವಾರರು ಓಡಾಟಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ರೈತ ಸಂಘದಿಂದ ರೈಲ್ವೆ ನಿಲ್ದಾಣದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ರೈಲ್ವೆ ಇಲಾಖೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಪ್ರತಿವರ್ಷ ಮುಂಗಾರು ಮಳೆ ಆರಂಭವಾದರೆ ಜಿಲ್ಲೆಯಾದ್ಯಂತ ಎಲ್ಲ ಕೆಳಸೇತುವೆಗಳು ಕೆರೆ, ಕುಂಟೆಯಾಗಿ ಬದಲಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದ ರೈಲ್ವೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಪ್ರತಿಭಟನನಿರತರು ದೂರಿದರು.

ಪ್ರತಿ ಮುಂಗಾರು ಮಳೆಯಲ್ಲೂ ಗಂಗಮ್ಮನ ಪಾಳ್ಯ, ಕುಂಬಾರ ಪಾಳ್ಯ, ಚಿಕ್ಕ ಅಂಕಂಡಹಳ್ಳಿ, ದೊಡ್ಡೇರಿ, ಸಕ್ಕನಹಳ್ಳಿ ತಿಮ್ಮಾಪುರ, ಚಿನ್ನ ಕೋಟೆ, ಇಂದಿರಾ ನಗರ, ಹೊಸಕೋಟೆ, ದೊಡ್ಡಹಸಾಳ, ಖಾದ್ರಿಪುರ, ಶ್ರೀನಿವಾಸಪುರ ಮಾವು ಮಾರುಕಟ್ಟೆ ಸಮೀಪದಲ್ಲಿರುವ ರೈಲ್ವೆ ಕೆಳಸೇತುವೆ ಜನಸಾಮಾನ್ಯರ ಪಾಲಿಗೆ ಯಮಲೋಕ ತೋರಿಸುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಅವೈಜ್ಞಾನಿಕ ರೈಲ್ವೆ ಕೆಳಸೇತುವೆಯಿಂದ ರೈತರ ತಮ್ಮ ಬೆಳೆಗಳನ್ನು ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸಾಧ್ಯವಾಗದೆ ಹರಾಜಿನಲ್ಲಿ ಕಡಿಮೆ ಬೆಲೆಗೆ ಮಾರಲು ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ್ವಿಚಕ್ರ ವಾಹನ, ಟೆಂಪೊ ಸೇರಿದಂತೆ ಮತ್ತಿತರ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಶಾಲಾ ಮಕ್ಕಳು ಶಾಲೆಗೆ ತೆರಳಲು ಅಂಡರ್‌ಪಾಸ್ ಮೂಲಕ ನಡೆದು ಹೋಗಲು ಭಯಪಡುತ್ತಿದ್ದಾರೆ. ಇದಕ್ಕೆಲ್ಲ ರೈಲ್ವೆ ಅಧಿಕಾರಿಗಳೇ ಕಾರಣ ಎಂದು  ಕಿಡಿಕಾರಿದರು.

ತಾಲ್ಲೂಕು ಅಧ್ಯಕ್ಷ ಕದಿರಿನತ್ತ ಅಪ್ಪೋಜಿರಾವ್, ಮರಗಲ್ ಶ್ರೀನಿವಾಸ್, ಲಕ್ಷ್ಮಣ್, ಸುರೇಶ್ ಬಾಬು, ಯಲ್ಲೋಜಿರಾವ್, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಾಂದ್‌ಪಾಷ, ಕಿರಣ್, ಬಾಬಾಜಾನ್, ಆರೀಪ್, ಜಾವೇದ್, ಮುನಿಯಪ್ಪ, ರಾಮಸಾಗರ ವೇಣು, ಕಿರಣ್, ಮುನಿಕೃಷ್ಣ, ಕದರಿನತ್ತ ಅಪ್ಪೋಜಿರಾವ್, ವಿಶ್ವ, ಮುನಿರಾಜು, ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ಶೈಲಜ, ರತ್ನಮ್ಮ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.