ADVERTISEMENT

ವ್ಯಾಪಾರಿಗಳಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಮಾಜಿ ಶಾಸಕ ರಮೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:34 IST
Last Updated 10 ಜನವರಿ 2026, 6:34 IST
ಶ್ರೀನಿವಾಸಪುರದ ಎಂ.ಜಿ ರಸ್ತೆಯ ಮಾರ್ಕೆಟ್ ವೃತ್ತದಲ್ಲಿ ಶುಕ್ರವಾರ ಅವರೆಕಾಯಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಆಲಿಸಿದರು
ಶ್ರೀನಿವಾಸಪುರದ ಎಂ.ಜಿ ರಸ್ತೆಯ ಮಾರ್ಕೆಟ್ ವೃತ್ತದಲ್ಲಿ ಶುಕ್ರವಾರ ಅವರೆಕಾಯಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಆಲಿಸಿದರು   

ಶ್ರೀನಿವಾಸಪುರ: ಅವರೆಕಾಯಿ ವಹಿವಾಟು ಸ್ಥಳಾಂತರ ವಿಚಾರದಲ್ಲಿ ರಕ್ಷಣಾವೇದಿಕೆ ಹಾಗೂ ಕೆಲ ರೈತ ಸಂಘಗಳು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಹಾಗೇನಾದರೂ ಮಾಡಿದರೆ ಹತೋಟಿ ತಪ್ಪುತ್ತದೆ. ನಂತರ ಪರಿಣಾಮ ಬೇರೆಯೇ ಇರುತ್ತದೆ, ಹುಷಾರ್ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಎಚ್ಚರಿಸಿದರು.

ಪಟ್ಟಣದ ಎಂಜಿ ರಸ್ತೆಯ ಮಾರ್ಕೆಟ್ ವೃತ್ತದಲ್ಲಿ ಶುಕ್ರವಾರ ಅವರೆಕಾಯಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.

ವ್ಯಾಪಾರಸ್ಥರು ಮಾಹಿತಿ ನೀಡಿ, ‘ಗುರುವಾರ ವಿವಿಧ ಸಂಘಟನೆಗಳು ಇಲ್ಲಿ ಪ್ರತಿಭಟನೆ ನಡೆಸಿದ್ದವು. ಈ ಸಮಯದಲ್ಲಿ ಕೆಲ ಪ್ರತಿಭಟನಕಾರರು ನಮಗೆ ವ್ಯಾಪಾರ ವಹಿವಾಟು ನಿಲ್ಲಿಸುವಂತೆ ಸೂಚಿಸಿದರು. ಪುರಸಭೆ ಕೆಲ ಸಿಬ್ಬಂದಿ ನಮ್ಮ ತಕ್ಕಡಿ ಹಾಗೂ ಅವರೆಕಾಯಿ ಮೂಟೆಗಳನ್ನು ಹೊತ್ತೊಯ್ದರು’ ಎಂದು ಮಾಜಿ ಶಾಸಕರಿಗೆ ತಿಳಿಸಿದರು.

ADVERTISEMENT

ವ್ಯಾಪಾರಸ್ಥರ ಅಹವಾಲು ಅಲಿಸಿದ ರಮೇಶ್‌ಕುಮಾರ್‌ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು.

‘ಇಲ್ಲಿ ಯಾರೇ ಆಗಲಿ ಸಾಹುಕಾರರಿಲ್ಲ. ಎಲ್ಲರೂ ಬಡವರು. ಅವತ್ತಿನ ಕುಟುಂಬ ನಿರ್ವಹಣೆಗಾಗಿ ಒಂದಿಷ್ಟು ಸಂಪಾದನೆ ಮಾಡಿಕೊಳ್ಳುತ್ತಾರೆ ಅಷ್ಟೇ. ಇದರಿಂದ ರೈತರಿಗೂ ಒಂದಿಷ್ಟು ಹಣ ಸಂಪಾದನೆ ಆಗುತ್ತದೆ. ವ್ಯಾಪಾರಸ್ಥರ ತಕ್ಕಡಿಗಳನ್ನು, ಅವರೆ ಕಾಯಿ ಮೂಟೆಗಳನ್ನು ಹೊತ್ತೊಯ್ಯುವುದು ತಪ್ಪು ಎಂದು  ಹೇಳಿದರು.

ಒಂದೂವರೆ ತಿಂಗಳ ಹಿಂದೆ ನಾನು ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಅವರೆಕಾಯಿ ಋತುಮಾನ ಬರಲಿದೆ. ಒಂದೂವರೆ ತಿಂಗಳು ಮಾತ್ರ ಋತುಮಾನ ಇರುತ್ತದೆ. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ಹಾಗೂ ವ್ಯಾಪರಸ್ಥರಿಗೆ ತೊಂದರೆ ಆಗದಂತೆ ಎಚ್ಚರವಹಿಸುವಂತೆ ಸೂಚಿಸಿದ್ದೆ ಎಂದರು.

ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೊಂದರೆ ಆಗದಂತೆ ನಡೆದುಕೊಳ್ಳಬೇಕು. ಪೊಲೀಸರ ಸೂಚನೆಯನ್ನು ಪಾಲಿಸಬೇಕು ಎಂದು ವ್ಯಾಪರಸ್ಥರಿಗೆ ಸೂಚಿಸಿದರು.  

ನಾನು ಉಪವಿಭಾಗಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ರೈತರಿಗೆ, ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ಪೊಲೀಸ್ ಇನ್‌ಸ್ಪೆಕ್ಟರ್‌ ಶಂಕರಚಾರ್, ಪಿಎಸ್‌ಐ ಜಯರಾಮ್, ಜಿ.ಪಂ.ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಕೆ.ಪಿ.ಸಿ.ಸಿ. ಸದಸ್ಯ ಸಂಜಯ್ ರೆಡ್ಡಿ, ಕೆ.ಎಂ.ಎಫ್ ನಿರ್ದೇಶಕ ಕೆ.ಕೆ.ಮಂಜುನಾಥ್ ರೆಡ್ಡಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭೆ ಮಾಜಿ ಅಧ್ಯಕ್ಷ ಬಿ ಎಂ.ಪ್ರಕಾಶ್, ಬಿ.ಆರ್.ಭಾಸ್ಕರ್, ಮಾಜಿ ಸದಸ್ಯ ಮುನಿರಾಜು, ಟಿ.ಎಂ.ಬಿ.ಮುಕ್ತಿಯಾರ್, ಹೇಮಂತ್ ಕುಮಾರ್, ನರಸಿಂಹಮೂರ್ತಿ, ಮುಖಂಡರಾದ ಸೀತಾರಾಮ ರೆಡ್ಡಿ, ಪಿ.ಆರ್.ಸೂರ್ಯನಾರಾಯಣ, ಸುರೇಶ್ ರೆಡ್ಡಿ, ದೊರೆಸ್ವಾಮಿ, ದಿಂಬಾಲ ಹರ್ಷ, ಕೆಂಪೇಗೌಡ, ವೆಂಕಟೇಶ್ ಗೌಡ , ವಿಶ್ವನಾಥ್ ರೆಡ್ಡಿ, ವ್ಯಾಪಾಸ್ಥರಾದ ಮುನಾವರ್, ಆರ್.ಕೆ.ಎಸ್.ಜಾವೀದ್, ಅಪೂರ್, ಬಾಲಾಜಿ, ಸಿ.ಆರ್.ಟಿ.ವೆಂಕಟರಾಮರೆಡ್ಡಿ, ರಘು ಇದ್ದರು.

ಅಧಿಕಾರಿಗಳು ಹಾಗೂ ಇತರೆ ಯಾರಾದರೂ ತೊಂದರೆ ಕೊಟ್ಟರೆ ನನಗೆ ದೂರವಾಣಿ ಮೂಲಕ ಮಾಹಿತಿ ನೀಡಿ. ನಾನು 20 ನಿಮಿಷದಲ್ಲಿ ತಮ್ಮ ಬಳಿ ಇರುತ್ತೇನೆ. ಬಡಜನರಿಗೆ ತೊಂದರೆ ಆಗಲು ಬಿಡುವುದಿಲ್ಲ
ಕೆ.ಆರ್.ರಮೇಶ್‌ ಕುಮಾರ್ ಮಾಜಿ ಶಾಸಕ