ಕೋಲಾರ: ತುಳುನಾಡಿನ ರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ ಪ್ರಯುಕ್ತ ಗುರುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ (ಎಬಿವಿಪಿ) ನಗರದ ಪ್ರಮುಖ ರಸ್ತೆಗಳಲ್ಲಿ ರಾಣಿ ಅಬ್ಬಕ್ಕ ರಥಯಾತ್ರೆ ನಡೆಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಹಿಂದುತ್ವ ಸಂಘಟನೆಗಳ ಮುಖಂಡರು ರಥಯಾತ್ರೆಗೆ ಚಾಲನೆ ನೀಡಿದರು.
ರಥಯಾತ್ರೆಯು ಟೇಕಲ್ ಕಲ್ಯಾಣಿ, ಡೂಂಲೈಟ್ ವೃತ್ತದ ಮೂಲಕ ಎಂ.ಜಿ.ರಸ್ತೆ, ಚಂಪಕ್ ವೃತದ ಮೂಲಕ ಕಾಲೇಜು ವೃತ್ತ ತಲುಪಿತು. ರಥಕ್ಕೆ ಎಬಿವಿಪಿ ಕಾರ್ಯಕರ್ತರು ಹಾಗೂ ಮುಖಂಡರು ಪುಷ್ಪಾರ್ಚನೆ ಮಾಡಿದರು. ಎಬಿವಿಪಿಯ ಬಾವುಟಗಳನ್ನು ಕೈಯಲ್ಲಿ ಹಿಡಿದು ಜೈಕಾರ ಕೂಗುತ್ತ ಹೆಜ್ಜೆ ಹಾಕಿದರು.
ಎಬಿವಿಪಿ ರಾಜ್ಯ ಮಾಜಿ ಕಾರ್ಯದರ್ಶಿ ಪ್ರೇಮಶ್ರೀ ಜೋಡಿಧರ್ ಮಾತನಾಡಿ, ‘ಸೆ.6ರಂದು ಪ್ರಾರಂಭವಾಗಿರುವ ರಥಯಾತ್ರೆಯು ಸೆ.17ರವರೆಗೆ ರಾಜ್ಯದಾದ್ಯಂತ ಸಂಚರಿಸಲಿದೆ. ರಾಣಿ ಅಬ್ಬಕ್ಕ ಸೇರಿದಂತೆ ನಾಡಿನ ವೀರನಾರಿಯರ ಪರಿಚಯವನ್ನು ಇಂದಿನ ತಲೆಮಾರಿಗೆ ಮಾಡಿಕೊಡಲಿದೆ’ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದರು. ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಉಲ್ಲಾಳದ ರಾಣಿ ಅಬ್ಬಕ್ಕ ಅವರ ಜೀವನ, ಶೌರ್ಯ, ಸಾಹಸ ಇಂದಿನ ಮಹಿಳೆಯರಿಗೆ ಸ್ಫೂರ್ತಿ. ಅಬ್ಬಕ್ಕಳ ಸ್ವಾಭಿಮಾನ, ಧೈರ್ಯ ಇಂದಿನ ಮಹಿಳೆಯರಲ್ಲಿ ಇರಬೇಕು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತೆ ಮಂಜುಳಾ ಭೀಮ್‌ರಾವ್ ಮಾತನಾಡಿ, ‘ಜನ್ಮ ಭೂಮಿಯನ್ನು ಪರಕೀಯರಿಂದ ರಕ್ಷಿಸಿಕೊಳ್ಳಲು ಯಾವುದೇ ಪುರುಷ ವೀರರಗಿಂತ ಕಡಿಮೆ ಇಲ್ಲದಂತೆ ಹೋರಾಟ ಮಾಡಿದ ಕಿತ್ತೂರು ರಾಣಿ ಚನ್ಮಮ್ಮ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ, ವೀರ ಒನಕೆ ಓಬವ್ವರಂತೆ ರಾಣಿ ಅಬ್ಬಕ್ಕ ಕೂಡ ಒಬ್ಬರು. ಇವರನ್ನು ಇಂದಿನ ಹಾಗೂ ಭವಿಷ್ಯದ ಪೀಳಿಗೆ ಅರಿಯುವಂತಾಗಬೇಕು’ ಎಂದು ತಿಳಿಸಿದರು.
‘ವಿದೇಶಿಯರ ಆಡಳಿತದ ವಿರುದ್ಧ ತಿರುಗಿ ಬಿದ್ದು ಅಬ್ಬಕ್ಕ ರಾಣಿಯು ಕಪ್ಪಕಾಣಿಕೆ ನೀಡಲು ನಿರಾಕರಿಸಿದ್ದರು. ಸ್ವದೇಶಿ ವಸ್ತುಗಳನ್ನೇ ಖರೀದಿಸಬೇಕೆಂದು ಫ್ರೆಂಚರ ವಿರುದ್ಧ ಹೋರಾಟ ನಡೆಸಿದರು. ಇಂಥ ವೀರನಾರಿಯನ್ನು ಇತಿಹಾಸದಿಂದ ಮರೆಮಾಚಿರುವುದು ನೋವಿನ ಸಂಗತಿ’ ಎಂದು ವಿಷಾದಿಸಿದರು.
ಯುವ ಜನತೆ ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಮಹಾಪಾಪದ ಕೆಲಸಕ್ಕೆ ಹೋಗಬಾರದು. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಧೈರ್ಯದಿಂದ ಎದುರಿಸಬೇಕು. ಇಂದು ಪ್ರತಿ ಸೆಕೆಂಡಿಗೆ ನಾಲ್ವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಬಿವಿಪಿ ಸಂಘಟನಾ ಕಾರ್ಯದರ್ಶಿ ಹೇಮಶ್ರೀ ಮಾತನಾಡಿ, ‘ಅಬ್ಬಕ್ಕ ರಾಣಿಯ ಬಗ್ಗೆ ಇಂದಿನ ಮಕ್ಕಳಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರಮಾತೆಯರ ಬಗ್ಗೆ ಇತಿಹಾಸದಲ್ಲಿ ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ರಾಷ್ಟ್ರ ಭಕ್ತಿ ಬೆಳೆಸುವಂತಾಗಬೇಕು’ ಎಂದು ಹೇಳಿದರು.
ಎಬಿವಿಪಿ ಯುವ ಮುಖಂಡ ಯಶ್ವಂತ್ ಮಾತನಾಡಿದರು. ಅಬ್ಬಕ್ಕ ರಾಣಿ ಪುತ್ಥಳಿಕೆಗೆ ಸದಾನಂದ ಪುಷ್ಪನಮನ ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೊಂಬೇಗೌಡ ಅವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಮುಖಂಡರಾದ ಮಂದಾರ, ಯಶ್ವವಂತ್, ಶಿಳ್ಳೆಂಗೆರೆ ಮಹೇಶ್, ಕೆಂಬೋಡಿ ಶ್ರೀನಿವಾಸ್, ಶ್ರೀವತ್ಸ, ಹಿಂದುತ್ವ ಸಂಘಟನೆಗಳ ಮುಖಂಡರು ಹಾಗೂ ಎಬಿವಿಪಿ ಕಾರ್ಯಕರ್ತರು ಇದ್ದರು.
ಅಬ್ಬಕ್ಕ ಕೇವಲ ರಾಣಿಯಲ್ಲ; ಇತಿಹಾಸ ಬದಲಾಯಿಸಿದ ವೀರನಾರಿ. ಅವರ ಜೀವನ ಸಾಧನೆಯನ್ನು ರಾಜ್ಯದ ಪ್ರತಿಯೊಬ್ಬರಿಗೂ ಈ ರಥಯಾತ್ರೆ ಮೂಲಕ ತಲುಪಿಸಲಾಗುವುದುಪ್ರೇಮಶ್ರೀ ಜೋಡಿಧರ್ ಎಬಿವಿಪಿ ರಾಜ್ಯ ಮಾಜಿ ಕಾರ್ಯದರ್ಶಿ
ಸಮಾಜವನ್ನು ತಿದ್ದುವಂತ ಕೆಲಸವನ್ನು ಎಬಿವಿಪಿ ಮಾಡುತ್ತಿರುವುದು ಶ್ಲಾಘನೀಯ ಸಂಗತಿ. ಒಳ್ಳೆಯ ಕೆಲಸ ಮಾಡುವ ಮೂಲಕ ಮಾತೃ ಪಿತೃ ಸಮಾಜ ರಾಷ್ಟ್ರ ಹಾಗೂ ದೇವರ ಋಣ ತೀರಿಸಬೇಕುಮಂಜುಳಾ ಭೀಮ್‌ರಾವ್ ಸಾಮಾಜಿಕ ಕಾರ್ಯಕರ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.