ADVERTISEMENT

ಹೊರ ರಾಜ್ಯದ ಪಡಿತರದಾರರಿಗೆ ಪಡಿತರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 14:21 IST
Last Updated 23 ಏಪ್ರಿಲ್ 2020, 14:21 IST

ಕೋಲಾರ: ಕೊರೊನಾ ಸೋಂಕಿನ ತಡೆಗಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದ ಪಡಿತರ ಚೀಟಿದಾರರಿಗೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸಲಾಗುತ್ತದೆ ಎಂದು ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆ ಉಪ ನಿರ್ದೇಶಕ ನಾಗರಾಜ್ ಕೆಳಗಿನಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಾಕ್‌ಡೌನ್ ಕಾರಣಕ್ಕೆ ಸಾರ್ವಜನಿಕರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಸಾಧ್ಯವಾಗದೆ ಇರುವುದರಿಂದ ಕೇಂದ್ರ ಸರ್ಕಾರ ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯಡಿ ಹೊರ ರಾಜ್ಯಗಳ ಪಡಿತರ ಚೀಟಿದಾರರಿಗೆ ಮೂಲ ರಾಜ್ಯದ ಪಡಿತರ ಚೀಟಿ ಆಧಾರದ ಮೇಲೆ ಪಡಿತರ ಕೊಡುವಂತೆ ಆದೇಶಿಸಿದೆ ಎಂದು ಹೇಳಿದ್ದಾರೆ.

ಹೊರ ರಾಜ್ಯಗಳ ಪಡಿತರದಾರರು ವಾಸಿಸುತ್ತಿರುವ ರಾಜ್ಯಗಳಲ್ಲಿನ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಿಸಲು ದತ್ತಾಂಶವನ್ನು ಕೇಂದ್ರ ಒದಗಿಸಿದೆ. ಪೋರ್ಟಬಲಿಟಿ ಜಾರಿಗೊಳಿಸುವ ಸಲುವಾಗಿ ಅಗತ್ಯವಿರುವ ಆಹಾರ ಧಾನ್ಯವನ್ನು ಕೇಂದ್ರವು ರಾಜ್ಯಕ್ಕೆ ಬಿಡುಗಡೆಗೊಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ನಗರ ಪ್ರದೇಶದಲ್ಲಿನ ವಿವಿಧ ಸೇವಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರು, ಕುಶಲ ಕರ್ಮಿಗಳು ಮೂಲ ರಾಜ್ಯದಲ್ಲಿನ ಪಡಿತರ ಚೀಟಿ ಹೊಂದಿದ್ದರೆ ಅವರಿಗೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಅವರಿಗೆ ಉಚಿತವಾಗಿ ಆಹಾರ ಧಾನ್ಯ ಒದಗಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯನ್ವಯ (ಎನ್‌ಎಫ್‌ಎಸ್‌ಎ) ಪ್ರತಿ ಕೆ.ಜಿ ₹ 3ರ ದರದಲ್ಲಿ ಎಎವೈ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿ ಮತ್ತು ಆದ್ಯತಾ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 5 ಕೆ.ಜಿಯಂತೆ ಅಕ್ಕಿ ಪಡೆಯಬಹುದು. ಹೊರ ರಾಜ್ಯದ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಯಲ್ಲಿನ ತಂತ್ರಾಂಶದಲ್ಲಿ ನಮೂದಿಸಿದರೆ ಆ ಮಾಹಿತಿಯನ್ನು ಕೇಂದ್ರದ ದತ್ತಾಂಶದಲ್ಲಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಪಡಿತರ ಚೀಟಿದಾರರಿಗೆ ಪಡಿತರ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಜಿಲ್ಲೆಯಲ್ಲಿ ಪಡಿತರ ವಿತರಿಸಲಾಗುವುದು. ಪಡಿತರ ಚೀಟಿದಾರರು ಮೂಲ ಸ್ಥಳದಲ್ಲಿ ಪಡಿತರ ಪಡೆದಿದ್ದರೆ ಅವರಿಗೆ ಜಿಲ್ಲೆಯಲ್ಲಿ ಪಡಿತರ ಹಂಚಿಕೆ ಲಭ್ಯವಾಗುವುದಿಲ್ಲ. ಪಡಿತರ ಚೀಟಿದಾರರು ಆಧಾರ್ ದೃಢೀಕೃತ ಬೆರಳಚ್ಚು ಮಾದರಿ ಅಥವಾ ಒಟಿಪಿ ಮೂಲಕವೇ ಪಡಿತರ ಪಡೆಯಬೇಹುದು ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.