
ಬಂಗಾರಪೇಟೆ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರು ಇಡೀ ದೇಶದ ಹೆಮ್ಮೆ. ಬ್ರಿಟಿಷರ ದಾಸ್ಯದಿಂದ ನಾಡನ್ನು ಮುಕ್ತಗೊಳಿಸಲು ನಡೆಸಿದ ಅವರ ತ್ಯಾಗ, ಬಲಿದಾನ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಲ್.ರಾಮಕೃಷ್ಣಪ್ಪ ಬಣ್ಣಿಸಿದರು.
ನಗರದ ಕುವೆಂಪು ವೃತ್ತದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ಅಂಗವಾಗಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕಿತ್ತೂರು ಸಂಸ್ಥಾನದ ರಕ್ಷಣೆ ಮತ್ತು ಬ್ರಿಟಿಷರ ದಬ್ಬಾಳಿಕೆ ವಿರುದ್ಧ ರಾಯಣ್ಣ ನಡೆಸಿದ ಹೋರಾಟ ಅಪ್ರತಿಮವಾದುದು. ಅವರ ಶೌರ್ಯ ಮತ್ತು ದೇಶಪ್ರೇಮದ ಇತಿಹಾಸವನ್ನು ಪ್ರತಿಯೊಬ್ಬರು ಸ್ಮರಿಸಬೇಕು. ರಾಯಣ್ಣರ ಆದರ್ಶಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕುವೆಂಪು ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಹೂಮಾಲೆ ಹಾಕುವ ಮೂಲಕ ಸಂಘದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ವೀರನಮನ ಸಲ್ಲಿಸಿ ಜಯಘೋಷ ಕೂಗಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಅಪ್ಪಯ್ಯಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶ್ವಥ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಸಿ.ಎನ್.ನಾಗರಾಜ್, ಆನಂದ್ ಬಾಬು, ಶ್ರೀನಿವಾಸ್, ಚಲಪತಿ, ಪಂಚರ್ ವೆಂಕಟೇಶ್, ವೆಂಕಟೇಶ್, ಪದ್ಮಾವತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.