ADVERTISEMENT

ಕುಂದು ಕೊರತೆ ಸಭೆ: ದೂರಿನ ಮಹಾಪೂರ

ಬಾಕಿ ಅರ್ಜಿ ಇತ್ಯರ್ಥಕ್ಕೆ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ತಾಕೀತು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 15:14 IST
Last Updated 28 ನವೆಂಬರ್ 2019, 15:14 IST
ಕೋಲಾರದಲ್ಲಿ ಗುರುವಾರ ಕುಂದು ಕೊರತೆ ಸಭೆ ನಡೆಸಿದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಸಾರ್ವಜನಿಕರ ಅಹವಾಲು ಆಲಿಸಿದರು.
ಕೋಲಾರದಲ್ಲಿ ಗುರುವಾರ ಕುಂದು ಕೊರತೆ ಸಭೆ ನಡೆಸಿದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಸಾರ್ವಜನಿಕರ ಅಹವಾಲು ಆಲಿಸಿದರು.   

ಕೋಲಾರ: ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು ಇಲ್ಲಿ ಗುರುವಾರ ನಡೆಸಿದ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದುಬಂದಿತು.

ಮಧ್ಯಾಹ್ನ 1.30ಕ್ಕೆ ಆರಂಭವಾಗದ ಸಭೆ ಸುಮಾರು 4 ತಾಸು ನಡೆಯಿತು. ಸಾರ್ವಜನಿಕರು ಮುಂಚಿತವಾಗಿ ಟೋಕನ್ ಪಡೆದು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ದೂರು ಸಲ್ಲಿಸಿದರು. ಭೂದಾಖಲೆಪತ್ರ ಸಮಸ್ಯೆ, ಭೂ ಮಂಜೂರಾತಿ, ಖಾತೆ ಬದಲಾವಣೆ, ಪಹಣಿ ತಿದ್ದುಪಡಿ, ಸರ್ಕಾರಿ ಜಾಗ, ಕೆರೆಯಂಗಳ ಹಾಗೂ ರಾಜಕಾಲುವೆ ಒತ್ತುವರಿ ಸಂಬಂಧ ಹೆಚ್ಚಿನ ದೂರು ಸಲ್ಲಿಕೆಯಾದವು.

ಸಮಾಧಾನದಿಂದ ಸಾರ್ವಜನಿಕರ ಅಹವಾಲು ಆಲಿಸಿದ ಹರ್ಷಗುಪ್ತ ಸ್ಥಳದಲ್ಲೇ ಕೆಲ ಪ್ರಕರಣ ಇತ್ಯರ್ಥಪಡಿಸಿದರು. ಕಾನೂನಾತ್ಮಕ ತೊಡಕಿನ ಹಾಗೂ ಗೊಂದಲದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಕಳುಹಿಸಿ ಇತ್ಯರ್ಥಪಡಿಸುವಂತೆ ಸೂಚಿಸಿದರು. ಸರ್ವೆ ಇಲಾಖೆ ಅಧಿಕಾರಿ ಸುರೇಶ್‌ಬಾಬು ವಿರುದ್ಧ ಭ್ರಷ್ಟಾಚಾರದ ದೂರು ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ADVERTISEMENT

‘ಹಲವು ವರ್ಷಗಳಿಂದ ಜಿಲ್ಲೆಯಲ್ಲೇ ಠಿಕಾಣಿ ಹೂಡಿರುವ ಸುರೇಶ್‌ಬಾಬು ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆಪತ್ರ ಸೃಷ್ಟಿಸಿ ಅಕ್ರಮವಾಗಿ ಭೂಗಳ್ಳರ ಹೆಸರಿಗೆ ಪರಭಾರೆ ಮಾಡಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ರಾಘವೇಂದ್ರ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹರ್ಷಗುಪ್ತ, ‘ಮಾತಿನಲ್ಲಿ ಹೇಳುವುದು ಸುಲಭ. ಅಧಿಕಾರಿಗಳು ಮಾಡಿರುವ ಅಕ್ರಮದ ಸಂಬಂಧ ದಾಖಲೆಪತ್ರ ದೂರು ನೀಡಿದರೆ ಖಂಡಿತ ನೀಡಿದರೆ ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಭರವಸೆ ನೀಡಿದರು.

ತಹಶೀಲ್ದಾರ್ ವಿರುದ್ಧ ದೂರು: ‘ಗ್ರಾಮದ ಬಳಿಯ ಗೋಮಾಳದ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಲಾಗಿತ್ತು. ಹಿಂದಿನ ತಹಶೀಲ್ದಾರ್ ವಿಜಯಣ್ಣ ಅವರು ಆ ಜಾಗವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿದ್ದಾರೆ’ ಎಂದು ತಾಲ್ಲೂಕಿನ ಹೊಳಲಿ ಗ್ರಾಮದ ಪ್ರಕಾಶ್ ದೂರು ನೀಡಿದರು.

‘ಕೋಚಿಮುಲ್‌ಗೆ 36 ಎಕರೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 10 ಎಕರೆ ಹಾಗೂ ಕ್ರಿಕೆಟ್ ಕ್ರೀಡಾಂಗಣಕ್ಕೆ ಗುತ್ತಿಗೆ ಆಧಾರದಲ್ಲಿ ಜಾಗ ನೀಡಲಾಗಿದೆ. ಉಳಿದ ಜಮೀನನ್ನು ವಿಜಯಣ್ಣ ಅವರು ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಲೇಔಟ್‌ ನಿರ್ಮಾಣ: ‘ಆಂಧ್ರಪ್ರದೇಶದ ಕಿರಣ್‌ರೆಡ್ಡಿ ಎಂಬುವರು ಗ್ರಾಮದ ಕೆರೆ ಅಂಗಳ ಒತ್ತುವರಿ ಮಾಡಿ ಲೇಔಟ್‌ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಅನುಮತಿ ನೀಡಬಾರದು’ ಎಂದು ಕೆಜಿಎಫ್‌ ತಾಲ್ಲೂಕಿನ ಮಸ್ಕಂ ಗ್ರಾಮಸ್ಥರು ಮನವಿ ಮಾಡಿದರು.

ಜಿಲ್ಲಾ ಕೇಂದ್ರದ ಕೋಲಾರಮ್ಮ ಬಡಾವಣೆ ನಿವಾಸಿಗಳು, ‘ನಗರದ ಅಮಾನಿಕೆರೆಗೆ ಕೆ.ಸಿ ವ್ಯಾಲಿ ನೀರನ್ನು ಬಿಡಬಾರದೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಈ ಒತ್ತಾಯಕ್ಕೆ ಮಣಿಯದೆ ಕೆರೆಗೆ ನೀರು ಹರಿಸಬೇಕು. ಕೆರೆಯಲ್ಲಿನ ಜಾಲಿ ಮರಗಳನ್ನು ತೆರವು ಮಾಡಬೇಕು. ಕೆರೆಯಂಗಳದ ಒತ್ತುವರಿ ತೆರವುಗೊಳಿಸಿ ಸುತ್ತಲೂ ತಂತಿ ಬೇಲಿ ಹಾಕಬೇಕು’ ಎಂದು ಕೋರಿದರು.

‘ಜಿಲ್ಲಾ ಪಂಚಾಯಿತಿ ಸದಸ್ಯ ಜಯಪ್ರಕಾಶ್‌ ಅವರು ಸರ್ಕಾರಿ ಜಮೀನು ಅತಿಕ್ರಮಿಸಿಕೊಂಡಿದ್ದಾರೆ. ಆ ಜಮೀನಿನಲ್ಲಿ ವಾಸವಿದ್ದ ದಲಿತರಿಗೆ ವಾಸ ಮಾಡಲು ಜಾಗವಿಲ್ಲ. ಆ ಜಮೀನಿನ ಒತ್ತುವರಿ ತೆರವುಗೊಳಿಸಿ ನಿವೇಶನರಹಿತ ದಲಿತರಿಗೆ ಹಂಚಿಕೆ ಮಾಡಬೇಕು’ ಎಂದು ಜನಾಧಿಕಾರ ಸಂಘಟನೆ ಸದಸ್ಯರು ಒತ್ತಾಯಿಸಿದರು.

ಕ್ರಷರ್‌ ಮುಚ್ಚಿಸಿ: ‘ಮಾಲೂರು, ಕೋಲಾರ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕ್ರಷರ್‌ಗಳನ್ನು ಮುಚ್ಚಿಸಬೇಕು‘ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತಪರ ಸಂಘಟನೆಗಳ ಸದಸ್ಯರು ದೂರು ನೀಡಿದರು.

‘ಹಲವು ವರ್ಷಗಳ ಹಿಂದೆ ರೈತರು ಸಲ್ಲಿಸಿರುವ ಅರ್ಜಿಗಳನ್ನು ಈವರೆಗೂ ಇತ್ಯರ್ಥಗೊಳಿಸದ ಸಂಬಂಧ ದೂರು ಬಂದಿವೆ. ಡಿಸೆಂಬರ್‌ನಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಯೊಳಗೆ ಬಾಕಿ ಅರ್ಜಿಗಳನ್ನು ಇತ್ಯರ್ಥಗೊಳಿಸಿ ವಿಲೇವಾರಿ ಮಾಡಿರಬೇಕು’ ಎಂದು ಹರ್ಷಗುಪ್ತ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹರ್ಷಗುಪ್ತ ಸಭೆಗೂ ಮುನ್ನ ತಾಲ್ಲೂಕು ಕಚೇರಿಯ ಭೂಮಿ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.