ADVERTISEMENT

ಕೋಲಾರ: ಜಿಲ್ಲಾ ನೌಕರರ ಭವನ ನವೀಕರಣ

​ಪ್ರಜಾವಾಣಿ ವಾರ್ತೆ
Published 8 ಜನವರಿ 2022, 16:12 IST
Last Updated 8 ಜನವರಿ 2022, 16:12 IST
ಕೋಲಾರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ನೌಕರರ ಭವನದ ನೀಲನಕ್ಷೆ ಬಿಡುಗಡೆ ಮಾಡಿದರು
ಕೋಲಾರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರ ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ನೌಕರರ ಭವನದ ನೀಲನಕ್ಷೆ ಬಿಡುಗಡೆ ಮಾಡಿದರು   

ಕೋಲಾರ: ಜಿಲ್ಲೆಯ ಸರ್ಕಾರಿ ನೌಕರರ ಭವನವನ್ನು ₹ 1.75 ಕೋಟಿ ವೆಚ್ಚದಲ್ಲಿ ನವೀಕರಿಸಲು ಉದ್ದೇಶಿಸಲಾಗಿದ್ದು, ಭವನದ ನೀಲನಕ್ಷೆ ಹಾಗೂ ಅಂದಾಜು ಪಟ್ಟಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಇಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಷಡಕ್ಷರಿ, ‘ಪಾರದರ್ಶಕ ಆಡಳಿತದ ಮೂಲಕ ನೌಕರರ ಸಂಘದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಈ ಹಿಂದೆ ಆಡಳಿತ ನಡೆಸಿದವರು ಅಧಿಕಾರದಿಂದ ಇಳಿಯುವಾಗ ಬ್ಯಾಂಕ್ ಖಾತೆ ಖಾಲಿ ಇರುತ್ತಿತ್ತು. ನಾವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷದಲ್ಲಿ ₹ 16 ಕೋಟಿ ಸಂಗ್ರಹಿಸಿ ಉಳಿಸಿದ್ದೇವೆ’ ಎಂದು ತಿಳಿಸಿದರು.

‘ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್‌ಬಾಬು ಅವರು ಸಂಘದ ಹಣವನ್ನು ದೇವರ ಹುಂಡಿಯ ಹಣವೆಂದು ಭಾವಿಸಿರುವುದರಿಂದ ಇಂದು ಧೈರ್ಯವಾಗಿ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನೌಕರರ ಸಂಘದ ಸರ್ವ ಸದಸ್ಯರ ಸಭೆ ನಡೆಯುತ್ತಿದೆ. ಅಧ್ಯಕ್ಷರು ನೌಕರರಿಗೆ ಹಣಕಾಸಿನ ಲೆಕ್ಕ ಒಪ್ಪಿಸಿದ್ದಾರೆ’ ಎಂದರು.

ADVERTISEMENT

‘ಜಿಲ್ಲಾ ನೌಕರರ ಭವನಕ್ಕೆ ಅಗತ್ಯವಿರುವ ಅನುದಾನ ಒದಗಿಸುತ್ತೇವೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಸಂಘಗಳಿಗೂ ಭೇಟಿ ನೀಡಿ ಲೆಕ್ಕಪತ್ರ ಪರಿಶೀಲನೆ ನಡೆಸುತ್ತೇವೆ’ ಎಂದು ಹೇಳಿದರು.

‘₹ 1.75 ಕೋಟಿ ವೆಚ್ಚದಲ್ಲಿ 3 ಮಹಡಿಯ ಜಿಲ್ಲಾ ನೌಕರರ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯ ಸಂಘ ₹ 1 ಕೋಟಿ ನೀಡುವುದಾಗಿ ತಿಳಿಸಿದ್ದು, ಮೊದಲ ಕಂತಾಗಿ ₹ 50 ಲಕ್ಷ ಬಿಡುಗಡೆ ಮಾಡಬೇಕು. ಫೆಬ್ರುವರಿ ಮೊದಲ ವಾರದಲ್ಲಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ’ ಎಂದು ಸುರೇಶ್‌ಬಾಬು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.