ADVERTISEMENT

ಗಣಿಗಾರಿಕೆ ರದ್ದುಪಡಿಸಲು ಆಗ್ರಹ

ಶಾಸಕ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 5:52 IST
Last Updated 24 ಜುಲೈ 2021, 5:52 IST
ಕೊಲಾರ ತಾಲೂಕಿನ ದೊಡ್ಡ ಅಯ್ಯೂರು ಗ್ರಾಮದಲ್ಲಿ ಕಲ್ಲುಗಣಿಗಾರಿಕೆಗೆ ಕೊಟ್ಟಿರುವ ಅನುಮೋದನೆ ರದ್ದುಪಡಿಸಬೇಕೆಂದು ಒತ್ತಾಯಿಸಿ ಶಾಸಕ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ದೊಡ್ಡ ಅಯ್ಯೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು
ಕೊಲಾರ ತಾಲೂಕಿನ ದೊಡ್ಡ ಅಯ್ಯೂರು ಗ್ರಾಮದಲ್ಲಿ ಕಲ್ಲುಗಣಿಗಾರಿಕೆಗೆ ಕೊಟ್ಟಿರುವ ಅನುಮೋದನೆ ರದ್ದುಪಡಿಸಬೇಕೆಂದು ಒತ್ತಾಯಿಸಿ ಶಾಸಕ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ದೊಡ್ಡ ಅಯ್ಯೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು   

ಕೋಲಾರ: ತಾಲ್ಲೂಕಿನ ದೊಡ್ಡ ಅಯ್ಯೂರು ಗ್ರಾಮದ ಸರ್ವೇ ನಂ.76ರಲ್ಲಿ 11ಎಕರೆ 20 ಕುಂಟೆ ಜಾಗವನ್ನು ಕಲ್ಲುಗಣಿಗಾರಿಕೆಗೆ ಕೊಟ್ಟಿರುವ ಅನುಮೋದನೆಯನ್ನು ರದ್ದುಪಡಿಸಿ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿ ಶಾಸಕ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ದೊಡ್ಡ ಅಯ್ಯೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

ದೊಡ್ಡ ಅಯ್ಯೂರು ಗ್ರಾಮದ ಸಮೀಪವೇ ಸ್ಥಳೀಯವಾಗಿ ಗ್ರಾಮಸ್ಥರಿಗೆ ತಿಳಿಯದೇ 2017-18ರಲ್ಲಿ ಗಣಿಗಾರಿಕೆ ಅನುಮತಿ ಕೊಡಲಾಗಿದೆ. ಇತ್ತೀಚಿಗೆ ಕೆಲಸ ಪ್ರಾರಂಭ ಮಾಡುವ ಸಂದರ್ಭದಲ್ಲಿ ಗ್ರಾಮಸ್ಥರ ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಗಣಿಗಾರಿಕೆಯ ಮಂಜೂರಾತಿ ಆದೇಶವನ್ನು ರದ್ದು ಮಾಡಬೇಕು ಒತ್ತಾಯಿಸಲಾಗಿತ್ತು.

ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಗ್ರಾಮಸ್ಥರು ಪ್ರತಿವರ್ಷವೂ ಜಾತ್ರೆ ಮಾಡಿ ವಿಜಯೋತ್ಸವ ಆಚರಣೆ ಮಾಡುವ ಸ್ಥಳವಾಗಿದೆ. ಬಂಡವಾಳಗಾರರ ಹಣದ ಆಸೆಗೆ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ ಇದನ್ನು ಕೂಡಲೇ ರದ್ದುಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ADVERTISEMENT

ದೊಡ್ಡ ಅಯ್ಯೂರು ಗ್ರಾಮ ಪಂಚಾಯಿತಿ ಸದಸ್ಯ ಎಸ್. ಗೋಪಾಲಕೃಷ್ಣ, ಈ ಜಾಗದಲ್ಲಿ ಗಣಿಗಾರಿಕೆ ನಡೆಸಿದರೆ ಗಾಳಿಯಲ್ಲಿ ಬರುವ ಕಲ್ಲಿನ ಪುಡಿ ರೈತರು ಬೆಳೆದ ಬೆಳೆಗಳು ಮತ್ತು ಜಾನುವಾರುಗಳು ತಿನ್ನುವ ಹುಲ್ಲಿನ ಮೇಲೆ ಪರಿಣಾಮ ಬಿದ್ದು ಜಾನುವಾರುಗಳು ಸಾವನ್ನಪ್ಪುತ್ತವೆ. ಕ್ರಷರ್ ಸ್ಥಾಪನೆಗೆ ಅನುಮೋದನೆ ನೀಡಿರುವ ಜಾಗದಿಂದ ಎಂಟು ಕೆರೆಗಳಿಗೆ ನೀರು ಬರುತ್ತವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕಲ್ಲುಗಣಿಕಾರಿಕೆಗೆ ಕೊಟ್ಟಿರುವ ಅನುಮೋದನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾತನಾಡಿ, ದೊಡ್ಡ ಅಯ್ಯೂರು ಗ್ರಾಮದಲ್ಲಿ ಸುಮಾರು 29 ತಿಂಗಳ ಹಿಂದೆಯೇ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಆ ಸ್ಥಳವನ್ನು ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಗ್ರಾಮಸ್ಥರಿಗೆ ಭರವಸೆ
ನೀಡಿದರು.

ಅರಾಭಿಕೊತ್ತನೂರು ಗ್ರಾಮ ಪಂಚಾಯತಿ ಸದಸ್ಯ ನಂಜುಂಡಗೌಡ, ಮಂಗಸಂದ್ರ ಗ್ರಾ.ಪಂ ಸದಸ್ಯ ಸುರೇಶ್, ಪ್ರಸನ್ನ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ವಕೀಲ ಹರೀಷ್ ಗೌಡ, ಜೋಳಘಟ್ಟ ಸೀನಪ್ಪ, ಡಿ.ಎನ್ ನಾರಾಯಣಸ್ವಾಮಿ, ಪಂಡಿತ್ ಮುನಿವೆಂಕಟಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.