ಕೋಲಾರ: ‘ಸಂಶೋಧನೆ ಮತ್ತು ನವೋದ್ಯಮವೇ ದೇಶದ ಸುಸ್ಥಿರ ಅಭಿವೃದ್ಧಿಗೆ ದಾರಿಯಾಗಿದೆ. ಇದರಿಂದ ಹಲವಾರು ಸಮಸ್ಯೆಗಳಿಗೆ ನವನವೀನ ಮತ್ತು ಸುಸ್ಥಿರ ಪರಿಹಾರ ಕಂಡುಕೊಳ್ಳಲು ಸಹಾಯವಾಗಲಿದೆ’ ಎಂದು ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.
ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಶುಕ್ರವಾರ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆ ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ವಿಶ್ವ ದರ್ಜೆಯ ಸಾಮರ್ಥ್ಯ ಅಭಿವೃದ್ಧಿಪಡಿಸುವ ಅಗತ್ಯವಿದೆ’ ಎಂದರು.
‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಸಂಶೋಧನೆಗೆ ಒತ್ತು ನೀಡುತ್ತಿದೆ. ಈ ನೀತಿಯ ಪ್ರಕಾರ ಉನ್ನತ ಶಿಕ್ಷಣ ಸಂಸ್ಥೆಗಳು ನವೋದ್ಯಮ, ಇನ್‌ಕ್ಯುಬೇಶನ್ ಕೇಂದ್ರಗಳು, ತಂತ್ರಜ್ಞಾನ ಅಭಿವೃದ್ಧಿ ಕೇಂದ್ರಗಳು ಮತ್ತು ಕೈಗಾರಿಕಾ ಶೈಕ್ಷಣಿಕ ಸಂಪರ್ಕಗಳ ಮೂಲಕ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಬೇಕು’ ಎಂದು ಸಲಹೆ ನೀಡಿದರು.
‘ಸುಸ್ಥಿರ ಅಭಿವೃದ್ಧಿಯ ಕಲ್ಪನೆ ಹೊಂದುವ ಅಗತ್ಯವಿದೆ. ಯಾವುದೇ ಕ್ಷೇತ್ರಕ್ಕೆ ಹೋದರೂ ಹಸಿರು ಭಾರತ, ಸ್ವಚ್ಛ ಭಾರತ ಮತ್ತು ಬಲಿಷ್ಠ ಭಾರತವನ್ನು ನಿರ್ಮಿಸುವಲ್ಲಿ ಎಲ್ಲರ ಪಾತ್ರ ಅಗತ್ಯ’ ಎಂದು ಕಿವಿಮಾತು ಹೇಳಿದರು.
‘ದೇಶವು ಸಾವಿರಾರು ವರ್ಷಗಳಿಂದ ಜ್ಞಾನದ ದೀಪವನ್ನು ಬೆಳಗಿಸುತ್ತಿದೆ. ವೇದಗಳು, ಉಪನಿಷತ್ತುಗಳು, ಆಯುರ್ವೇದ, ಯೋಗ, ವಾಸ್ತು, ತತ್ವಶಾಸ್ತ್ರ, ನ್ಯಾಯಶಾಸ್ತ್ರ ನಮ್ಮ ಅಮೂಲ್ಯ ಪರಂಪರೆಯಾಗಿವೆ. ಹೊಸ ಶಿಕ್ಷಣ ನೀತಿಯು ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತೆ ಅವುಗಳಿಗೆ ಸ್ಥಾನ ನೀಡಿದೆ. ಯುವಕರು ಈ ಜ್ಞಾನದ ಹರಿವುಗಳನ್ನು ಆಧುನಿಕ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬೇಕು, ಸಂಶೋಧನೆ ಮಾಡಬೇಕು ಮತ್ತು ಜಾಗತಿಕ ವೇದಿಕೆಯಲ್ಲಿ ಅದನ್ನು ಪ್ರಸ್ತುತಪಡಿಸಬೇಕು’ ಎಂದರು.
‘ಜಗತ್ತು ವೇಗವಾಗಿ ಬದಲಾಗುತ್ತಿದ್ದು, ಕೇವಲ ಪದವಿ ಪಡೆಯುವುದು ಸಾಕಾಗುವುದಿಲ್ಲ. ನಿರಂತರವಾಗಿ ಕಲಿಯುವ ಸಾಮರ್ಥ್ಯ, ನೈತಿಕ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಪ್ರಜ್ಞೆ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಯುವ ಶಕ್ತಿಯಾಗಿ ನಮ್ಮ ಹೆಣ್ಣುಮಕ್ಕಳು ಪ್ರತಿ ಕ್ಷೇತ್ರದಲ್ಲೂ ಹೊಸ ಎತ್ತರವನ್ನು ಮುಟ್ಟುತ್ತಿದ್ದಾರೆ. ನಾರಿ ಶಕ್ತಿ ಯಾವಾಗಲೂ ರಾಷ್ಟ್ರೀಯ ಶಕ್ತಿಯನ್ನು ಜಾಗೃತಗೊಳಿಸಲು ಮತ್ತು ರಾಷ್ಟ್ರೀಯ ಶಕ್ತಿಯನ್ನು ಹೆಚ್ಚಿಸಲು ಶ್ರಮಿಸಿದೆ. ಇಲ್ಲಿಯೂ ಚಿನ್ನದ ಪದಕ ಪಡೆದವರಲ್ಲಿ ಹೆಚ್ಚಿನವರು ಹೆಣ್ಣು ಮಕ್ಕಳೇ ಇದ್ದಾರೆ’ ಎಂದು ಶ್ಲಾಘಿಸಿದರು
ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಮುಖ್ಯ ಅತಿಥಿ ವೂಡೆ ಪಿ.ಕೃಷ್ಣ, ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಕುಲಸಚಿವರಾದ ಪ್ರೊ.ಎನ್.ಲೋಕನಾಥ್, ಸಿ.ಎನ್.ಶ್ರೀಧರ್ ಇದ್ದರು.
ಭಾರತ ನವೋದ್ಯಮದ ತೊಟ್ಟಿಲು
‘ಪ್ರಸ್ತುತ ಭಾರತದಲ್ಲಿ ನವೋದ್ಯಮಗಳ ಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚಿದೆ. ದೇಶವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆ ಹೊಂದಿದೆ. ನೂರಕ್ಕೂ ಹೆಚ್ಚು ಯುನಿಕಾರ್ನ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರ ಪರಿಣಾಮ ದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ’ ಎಂದು ಥಾವರಚಂದ್ ಗೆಹಲೋತ್ ಹೇಳಿದರು. ‘ಬೆಂಗಳೂರಿನಂತಹ ನಗರದಲ್ಲಿ ನವೋದ್ಯಮ ಮತ್ತು ತಂತ್ರಜ್ಞಾನದ ಶಕ್ತಿ ತುಂಬಿ ತುಳುಕುತ್ತಿರುವಾಗ ನಾವೀನ್ಯತೆ ಮತ್ತು ಸಾಮಾಜಿಕ ಉದ್ಯಮಶೀಲತೆಯಲ್ಲಿ ಯುವಜನತೆ ಮುನ್ನಡೆಯಬೇಕೆಂದು ನಿರೀಕ್ಷಿಸುವುದು ಸಹಜ. ಭಾರತದ ಆರ್ಥಿಕತೆಯು ತ್ವರಿತಗತಿಯಲ್ಲಿ ಬೆಳೆದಿದ್ದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದೆ. ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಬೇಕೆಂದು ಅದಕ್ಕಾಗಿ ನಾವೆಲ್ಲರೂ ಮತ್ತಷ್ಟು ಪ್ರಯತ್ನ ಮಾಡಬೇಕಿದೆ’ ಎಂದು ಕರೆ ನೀಡಿದರು.
ಶಿಕ್ಷಣ ಯಾವತ್ತಿಗೂ ವ್ಯರ್ಥವಾಗುವುದಿಲ್ಲ. ಅದನ್ನು ಕಳ್ಳತನ ಮಾಡಲು ಆಗಲ್ಲ. ಕಲಿಯುತ್ತಿರಬೇಕು ಕಲಿಸುತ್ತಿರಬೇಕು. ತಮ್ಮ ಯಶಸ್ವಿನ ಹಿಂದೆ ಪೋಷಕರ ಪರಿಶ್ರಮ ಇರುತ್ತದೆ. ಅವರನ್ನು ಮರೆಯಬೇಡಿ–ಥಾವರಚಂದ್ ಗೆಹಲೋತ್, ರಾಜ್ಯಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.