ADVERTISEMENT

ಕೋಲಾರ ಜಿಲ್ಲಾ ಕುರುಬರ ಸಂಘದಲ್ಲಿ ಭಿನ್ನಾಭಿಪ್ರಾಯ

ಚುನಾವಣೆಯಲ್ಲಿ ಬೆಂಬಲ; ಮಾತಿನ ಚಕಮಕಿ, ಧಮ್ಕಿ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 4:54 IST
Last Updated 18 ಜನವರಿ 2023, 4:54 IST
   

ಕೋಲಾರ: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಚುನಾವಣೆಯಲ್ಲಿ ಬೆಂಬಲ ನೀಡುವ ವಿಚಾರವಾಗಿ ಜಿಲ್ಲಾ ಕುರುಬರ ಸಂಘದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.

ಸಂಘದ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ರಾಜ್ಯ ಕುರುಬರ ಸಂಘದ ಮಾಜಿ ನಿರ್ದೇಶಕರ ನಡುವೆಯೇ ಆರೋಪ, ಪ್ರತ್ಯಾರೋಪ, ಧಮ್ಕಿ ಆರೋಪ ಹಾಗೂ ಮಾತಿನ ಚಕಮಕಿಗೆ ಕಾರಣವಾಗಿದೆ.

‘ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಕುರುಬರ ಸಂಘ ಸಂಪೂರ್ಣ ಬೆಂಬಲ ಘೋಷಿಸುತ್ತದೆ. ಅವರ ಪರ ಹಳ್ಳಿಹಳ್ಳಿಗೂ ಹೋಗಿ ಪ್ರಚಾರ ಮಾಡುತ್ತೇವೆ’ ಎಂದು ಸಂಘದ ಕಾರ್ಯಾಧ್ಯಕ್ಷ ಜೆ.ಕೆ.ಜಯರಾಂ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಕೋಲಾರ ಹಾಗೂ ಕುರುಬರ ಸಮಾಜಕ್ಕೆ ಸಿದ್ದರಾಮಯ್ಯ ನೀಡಿದ ಕೊಡುಗೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದರು.

ADVERTISEMENT

ಈ ಮಧ್ಯೆ, ಸಂಘದ ಅಧ್ಯಕ್ಷ ತಂಬಹಳ್ಳಿ ಮುನಿಯಪ್ಪ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿ ವರ್ತೂರು ಪ್ರಕಾಶ್‌ ಜೊತೆ ಗುರುತಿಸಿಕೊಂಡಿದ್ದಾರೆ. ರಾಜ್ಯ ಕುರುಬರ ಸಂಘದ ಮಾಜಿ ನಿರ್ದೇಶಕ ಕೆ.ಟಿ.ಅಶೋಕ್‌, ಜೆಡಿಎಸ್‌ ಪರವಾಗಿ ನಿಂತಿದ್ದಾರೆ.

ಈ ವಿಚಾರವಾಗಿ ಅಶೋಕ್‌ ಹಾಗೂ ಜಯರಾಂ ನಡುವೆ ಮಾತಿನ ಚಕಮಕಿ ನಡೆದಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ
ಹರಿದಾಡುತ್ತಿದೆ.

‘ಕುರುಬರ ಸಮುದಾಯದವರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಸಂಘದ ಪದಾಧಿಕಾರಿಗಳಾಗಿದ್ದವರು ಸಮುದಾಯವನ್ನು ಗೊಂದಲಕ್ಕೆ ತಳ್ಳಬಾರದು, ರಾಜಕಾರಣ ಮಾಡಬಾರದು. ಈ ವಿಚಾರ ಹೇಳಿದ್ದಕ್ಕೆ ನನಗೆ ಜಯರಾಂ ಧಮ್ಕಿ ಹಾಕಿದ್ದಾರೆ. ನಮ್ಮ ಕೊಡುಗೆ ಏನು ಎಂಬುದಾಗಿ ಕೇಳಿದರು. ಕುರುಬ ಸಮುದಾಯದವನಾಗಿ ಒಕ್ಕಲಿಗರಿಗೆ ಏಕೆ ಬೆಂಬಲ ನೀಡುತ್ತಿದ್ದೀಯಾ ಎಂದು ಕೇಳಿದರು’ ಎಂದು ಅಶೋಕ್‌ ತಿಳಿಸಿದರು.

‘ನನ್ನ ಬೆಂಬಲ ಜೆಡಿಎಸ್‌ಗೆ. ಪದಾಧಿಕಾರಿಯಾಗಿದ್ದರೆ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡುತ್ತಿರಲಿಲ್ಲ. ಕಾಂಗ್ರೆಸ್‌ಗೆ ಬೇಕಾದರೆ ಜಯರಾಂ ಬೆಂಬಲ ನೀಡಲಿ. ಅದಕ್ಕೂ ಮುನ್ನ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಜಯರಾಂ, ‘ರಾಜ್ಯ ಕುರುಬರ ಸಂಘದ ನಿರ್ದೇಶಕರಾಗಿದ್ದಾಗ ಅಶೋಕ್‌ ಸಮಾಜಕ್ಕೆ ಏನೂ ಕೊಡುಗೆ ನೀಡಿಲ್ಲ. ಆದರೆ, ನಾನು ಸಮುದಾಯಕ್ಕೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಆದರೆ, ಏನೂ ಮಾಡಿಲ್ಲವೆಂದು ಅವರು ಆರೋಪಿಸಿದಾಗ ಮನಸ್ಸಿನ ನೋವಾಗಿ ಮಾತನಾಡಿದೆ’ ಅಷ್ಟೆ
ಎಂದರು.

ಸಿದ್ದರಾಮಯ್ಯ ಹಾಗೂ ವರ್ತೂರು ಪ್ರಕಾಶ್‌ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಷೇತ್ರದಲ್ಲಿ ಸುಮಾರು 28 ಸಾವಿರ ಕುರುಬ ಸಮುದಾಯದ ಮತಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.