
ಕೆಜಿಎಫ್: ಸಾರ್ವಜನಿಕ ಜೀವನದಲ್ಲಿ ರೌಡಿ ಚಟುವಟಿಕೆಗಳನ್ನು ಬಿಟ್ಟು ಗೌರವಯುತವಾಗಿ ಬಾಳ್ವೆ ಮಾಡಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರೌಡಿಗಳಿಗೆ ಎಚ್ಚರಿಕೆ ನೀಡಿದರು.
ಆ್ಯಂಡರ್‌ಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸೂಸೈಪಾಳ್ಯ ಮತ್ತು ಸೊರೆಕಾಯಿಪೇಟೆ ಪ್ರದೇಶದಲ್ಲಿ ಶನಿವಾರ ರಾತ್ರಿ ಪೊಲೀಸರು ಪಥ ಸಂಚಲನ ನಡೆಸಿದರು.
ಈ ವೇಳೆ ಪೊಲೀಸ್ ರೌಡಿಶೀಟ್ ಪಟ್ಟಿಯಲ್ಲಿರುವ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಅವರ ಕುಟುಂಬ ಸದಸ್ಯರ ಜೊತೆ ಮಾತನಾಡಿದ ಎಸ್‌ಪಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು. ಜನರಲ್ಲಿ ಭೀತಿಯನ್ನುಂಟು ಮಾಡುವುದು, ಬೆದರಿಕೆ ಹಾಕುವುದು ಮುಂತಾದ ಕೃತ್ಯಗಳನ್ನು ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಸಮಾಜದಲ್ಲಿ ದುರ್ವರ್ತನೆ ತೋರಿದ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಮುಂದೆ ನಿಮ್ಮ ಸರದಿ ಬಾರದಂತೆ ಎಚ್ಚರಿಕೆ ವಹಿಸಬೇಕು. ಗೌರವಯುತ ಬಾಳ್ವೆ ಮಾಡಬೇಕು. ಆಗ ಪೊಲೀಸರು ಕೂಡ ಸಹಕಾರ ಕೊಡುತ್ತಾರೆ ಎಂದು ಹೇಳಿದರು.
ಕಳೆದ ವಾರ ಪೊಲೀಸರು ಸಂಜಯಗಾಂಧಿನಗರ, ಅಂಬೇಡ್ಕರ್ ನಗರ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದ್ದು, ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದವರಿಗೆ ಎಚ್ಚರಿಕೆ ನೀಡಿದ್ದರು.
ಡಿವೈಎಸ್‌ಪಿ ಲಕ್ಷ್ಮಯ್ಯ, ಸರ್ಕಲ್ ಇನ್‌ಸ್ಪೆಕ್ಟರ್ ಮಾರ್ಕೊಂಡಯ್ಯ, ನವೀನ್, ವಿವಿಧ ಠಾಣೆಗಳ ಸಬ್ ಇನ್‌ಸ್ಪೆಕ್ಟರ್ಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.