ADVERTISEMENT

ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುತ್ತೇವೆ: ಎನ್‌.ಮುನಿರತ್ನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 13:14 IST
Last Updated 26 ಫೆಬ್ರುವರಿ 2022, 13:14 IST
ಎನ್‌.ಮುನಿರತ್ನ
ಎನ್‌.ಮುನಿರತ್ನ   

ಕೋಲಾರ: ‘ಉಕ್ರೇನ್‌ನಲ್ಲಿ ಸಿಲುಕಿರುವ ಜಿಲ್ಲೆಯ 4 ವಿದ್ಯಾರ್ಥಿಗಳು ಸೇರಿದಂತೆ ದೇಶದ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಡಿಗೆ ಕರೆತರಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಉಕ್ರೇನ್‌ನಲ್ಲಿರುವ ದೇಶದ ವಿದ್ಯಾರ್ಥಿಗಳು ಸುರಕ್ಷಿತವಾಗಿ ದೇಶಕ್ಕೆ ಮರಳಲಿದ್ದು, ಪೋಷಕರು ಆತಂಕಪಡುವ ಅಗತ್ಯವಿಲ್ಲ. ಉಕ್ರೇನ್‌ನಲ್ಲಿನ ಭಾರತದ ರಾಯಭಾರ ಕಚೇರಿಯ ಜತೆ ಕೇಂದ್ರವು ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳನ್ನು ವಿಶೇಷ ವಿಮಾನಗಳಲ್ಲಿ ದೇಶಕ್ಕೆ ಕರೆತರುವ ಪ್ರಯತ್ನ ಆರಂಭವಾಗಿದೆ’ ಎಂದರು.

‘ಕಾಂಗ್ರೆಸ್‌ ನಾಯಕರು ಸದನದಲ್ಲಿ ಧರಣಿ ಹೆಸರಲ್ಲಿ ಪ್ರಚಾರಕ್ಕಾಗಿ ಅಂತ್ಯಾಕ್ಷರಿ ಹಾಡಿಕೊಂಡು ಸದನದ ಸಮಯ ವ್ಯರ್ಥ ಮಾಡಿದರು. ಇದೀಗ ಮೇಕೆದಾಟು ಹೆಸರಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಸದನದಲ್ಲಿ ಮೇಕೆದಾಟು ಯೋಜನೆ ವಿಚಾರ ಪ್ರಸ್ತಾಪಿಸದ ಕಾಂಗ್ರೆಸ್‌ ನಾಯಕರು ಈಗ ಪ್ರಚಾರಕ್ಕೆ ಪಾದಯಾತ್ರೆ ಹೊರಟಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಕಾಂಗ್ರೆಸ್‌ ನಾಯಕರು ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಅಧಿಕಾರ ಹಾಗೂ ಪ್ರಚಾರಕ್ಕೆ ಕಾಂಗ್ರೆಸ್‌ ಸದಾ ಮುಂದುರಿತ್ತದೆ. ಸಚಿವ ಸಂಪುಟ ಪುನರ್‌ ರಚನೆ ಹಾಗೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಸರ್ಕಾರದ ಮುಂದಿಲ್ಲ. ಮುಖ್ಯಮಂತ್ರಿಗಳು ಜನಪರವಾಗಿ ಕೆಲಸ ಮಾಡುತ್ತಿದ್ದು, ಪೂರ್ಣಾವಧಿ ಪೂರೈಸುತ್ತಾರೆ’ ಎಂದು ತಿಳಿಸಿದರು.

‘ರೈತರ ಸಮಸ್ಯೆಗೆ ಸ್ಪಂದಿಸುವುದು ಮತ್ತು ಅವರ ನೆರವಿಗೆ ನಿಲ್ಲುವುದು ಸರ್ಕಾರದ ಆದ್ಯ ಕರ್ತವ್ಯ. ಪ್ರಸಕ್ತ ಬಜೆಟ್‌ನಲ್ಲಿ ಜಿಲ್ಲೆಗೆ ಸಂಸ್ಕರಣಾ ಘಟಕ ಮತ್ತು ಶಿಥಲೀಕರಣ ಘಟಕ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಮಾಲೂರಿನಲ್ಲಿ ₹ 5 ಕೋಟಿ ವೆಚ್ವದಲ್ಲಿ ಶಿಥಲೀಕರಣ ಘಟಕ ಆರಂಭಿಸಲಾಗುತ್ತದೆ. ರೈತರಿಗೆ ವಿಮೆ ಪಾವತಿ ಮಾಡಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.