ಕೋಲಾರ: ’ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 7 ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರಿಂದ ಏನೂ ಉಪಯೋಗವಿಲ್ಲವೆಂದು ಜನರು 2019ರಲ್ಲಿ ನನ್ನನ್ನು ಸಂಸದನನ್ನಾಗಿ ಆಯ್ಕೆ ಮಾಡಿದ್ದರು. ಕೇಂದ್ರ ಸಚಿವರಾಗಿದ್ದಾಗಲೂ ಅವರು ಯಾವುದೇ ಅಭಿವೃದ್ಧಿ ಮಾಡದೆ ಇಂದಿಗೂ ಹೇಳುತ್ತಿರುವ ಹಸಿ ಸುಳ್ಳುಗಳನ್ನು ಬಿಡಬೇಕು’ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಕುಟುಕಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರಿಕುಪ್ಪಂನಿಂದ ಕುಪ್ಪಂವರೆಗೆ ರೈಲು ಹಳಿ ವಿಸ್ತರಣೆ ಮಾಡಿದ್ದು, ಇಂಡಸ್ಟ್ರಿಯಲ್ ಕಾರಿಡಾರ್ ಮಾಡಿಸಿದ್ದು ತಾವು ಎಂಬುದಾಗಿ ಮುನಿಯಪ್ಪ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಆದರೆ ಮಾರಿಕುಪ್ಪಂಗೆ ಸಂಪರ್ಕ ಕಲ್ಪಿಸಿದ್ದು, ಊರಿಗಾಂ, ಮಾಲೂರು ಸೇರಿದಂತೆ ವಿವಿಧ ರೈಲು ನಿಲ್ದಾಣಗಳ ಅಭಿವೃದ್ಧಿ, ಎಲೆಕ್ಟ್ರಿಕ್ ಲೈನ್ ಸೇರಿದಂತೆ ಅನೇಕ ಕಾಮಗಾರಿ ಮಾಡಿದ್ದು ನನ್ನ ಅವಧಿಯಲ್ಲಿ’ ಎಂದರು.
‘ಈಚೆಗೆ ಸೋಮಣ್ಣ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಬಳಿಕ ಸ್ಯಾನಿಟೋರಿಯಂ ಬಳಿ ಸೇತುವೆ, ಟೇಕಲ್ ರಸ್ತೆಯಲ್ಲಿ ಮೇಲ್ಸೇತುವೆ ಮಂಜೂರು ಮಾಡಿಸಿದ್ದೇವೆ. ಇದಲ್ಲದೇ ಇಂಡಸ್ಟ್ರಿಯಲ್ ಕಾರಿಡಾರ್, ಕೆಜಿಎಫ್ ಅಮೃತ್ ಸಿಟಿ ಆಗಿದ್ದು ನಮ್ಮ ಕಾಲದಲ್ಲಿ. ಸುಳ್ಳು ಹೇಳುವುದನ್ನು ಮುನಿಯಪ್ಪ ಬಿಡಬೇಕು. ಅವರ ಬಗ್ಗೆ ನಮಗೆ ಗೌರವ ಇದೆ’ ಎಂದು ನುಡಿದರು.
‘ಗಣೇಶ ಚತುರ್ಥಿ ವೇಳೆ ಡಿ.ಜೆಗೆ ಅವಕಾಶವಿಲ್ಲವೆಂದು ನ್ಯಾಯಾಲಯದ ತೀರ್ಪು ತೋರಿಸುವವರು ಆಜಾನ್ ಕೂಗುವುದಕ್ಕೆ ಏಕೆ ತೀರ್ಪನ್ನು ತೋರಿಸುತ್ತಿಲ್ಲ? ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆಂದೂ ಅಧಿಕಾರಕ್ಕೆ ಬರುವುದಿಲ್ಲ’ ಎಂದರು.
ಧರ್ಮಸ್ಥಳ ಪರ ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ಪ್ರತ್ಯೇಕವಾಗಿ ತೆರಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಕ್ಷಗಳ ನಾಯಕರು ದಿನಾಂಕ ನಿಗದಿಪಡಿಸಿರುವ ಕಾರಣ ಒಂದು ದಿನ ಹೆಚ್ಚು ಕಡಿಮೆ ಇದೆ. ಎಲ್ಲರೂ ಧರ್ಮಸ್ಥಳದ ಪರವಾಗಿಯೇ ಹೋರಾಟ ನಡೆಸುತ್ತಿದ್ದಾರೆ’ ಎಂದು ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಮುಖಂಡ ನಾಗಭೂಷಣ್, ಮುಳಬಾಗಿಲು ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ರೆಡ್ಡಿ ಇದ್ದರು.
'ಇಟಲಿ ಮೇಡಂ ಮೆಚ್ಚಿಸಲು ಡಿಕೆಶಿ ಯತ್ನ' ‘ಇಡೀ ದೇಶದಲ್ಲೇ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧರ್ಮದ ವಿಚಾರವಾಗಿ ಅತ್ಯಂತ ಕಡು ಬಡ ಶಾಸಕರಾಗಿದ್ದಾರೆ. ಸದನದಲ್ಲಿ ಆರ್‌ಎಸ್‍ಎಸ್ ಗೀತೆ ಹೇಳಿದ್ದಕ್ಕೆ ಇಟಲಿ ಮೇಡಂ ಹಾದಿಯಾಗಿ ಕಾಂಗ್ರೆಸ್ಸಿನ ಟೀಮ್ ಎಚ್ಚರಿಕೆ ನೀಡಿದೆ. ಹೀಗಾಗಿ ದಸರಾ ವಿಚಾರವಾಗಿ ಅವರನ್ನು ಮೆಚ್ಚಿಸಲು ನಾನಾ ಹೇಳಿಕೆ ನೀಡಿ ಇಟಲಿ ಮೇಡಂ ದಾಸರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಮುನಿಸ್ವಾಮಿ ಲೇವಡಿ ಮಾಡಿದರು.
‘ದಸರೆಗೆ ಬಾನು ಬೇಡ’ ‘ಹಿಂದೂಗಳಿಗೆ ನಿರಂತರ ತೊಂದರೆ ಕೊಟ್ಟವರ ಪರವಾಗಿಯೇ ಸದಾ ಸರ್ಕಾರ ನಿಂತಿದೆ. ದಸರಾ ಉದ್ಘಾಟಿಸಲು ಬಾನು ಮುಷ್ತಾಕ್ ಆಯ್ಕೆ ಖಂಡನೀಯ. ಕನ್ನಡ ಹಾಗೂ ಕನ್ನಡಪರ ಹೋರಾಟಗಾರರ ಕ್ಷಮೆ ಕೇಳಬೇಕು. ಬಾನು ಮುಷ್ತಾಕ್ ಯಾವುದೇ ಕಾರಣಕ್ಕೂ ದಸರಾ ಉದ್ಘಾಟನೆ ಮಾಡಬಾರದು. ರಾಜ್ಯದಲ್ಲಿ ಅನೇಕ ಸಾಧಕರಿದ್ದು ಅವರಲ್ಲಿ ಯಾರನ್ನಾದರೂ ಆಯ್ಕೆ ಮಾಡಲಿ’ ಎಂದು ಮುನಿಸ್ವಾಮಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.