ADVERTISEMENT

ಸಲ್ಲಾಪುರಮ್ಮ ಜಾತ್ರಾ ಸಂಭ್ರಮ

ಉಟ್ಲು ಕಾಯಿ ಒಡೆದು ಸಂಭ್ರಮಿಸಿದ ಯುವಕರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 5:05 IST
Last Updated 7 ಫೆಬ್ರುವರಿ 2023, 5:05 IST
ಕೀಲುಹೊಳಲಿ ಗ್ರಾಮದಲ್ಲಿ ಸೋಮವಾರ ಸಲ್ಲಾಪುರಮ್ಮ ಜಾತ್ರಾ ಮಹೋತ್ಸವ‌ದ ಪ್ರಯುಕ್ತ ಉಟ್ಲು ಕಾಯಿ ಒಡೆಯುವ ಸ್ಪರ್ಧೆ ನಡೆಯಿತು
ಕೀಲುಹೊಳಲಿ ಗ್ರಾಮದಲ್ಲಿ ಸೋಮವಾರ ಸಲ್ಲಾಪುರಮ್ಮ ಜಾತ್ರಾ ಮಹೋತ್ಸವ‌ದ ಪ್ರಯುಕ್ತ ಉಟ್ಲು ಕಾಯಿ ಒಡೆಯುವ ಸ್ಪರ್ಧೆ ನಡೆಯಿತು   

ಮುಳಬಾಗಿಲು: ತಾಲ್ಲೂಕಿನ ದೇವರಾಯಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೀಲುಹೊಳಲಿ ಗ್ರಾಮದ ಸಲ್ಲಾಪುರಮ್ಮ ದೇವಿಯ ಜಾತ್ರಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯಿತು.

ಐತಿಹಾಸಿಕ ಆವಣಿಯ ಜಾತ್ರಾ ಮಹೋತ್ಸವ ನಡೆಯುವ ಮೊದಲು ಸಲ್ಲಾಪುರಮ್ಮ ಜಾತ್ರಾ ಮಹೋತ್ಸವ ನಡೆಯುವುದು ಸಂಪ್ರದಾಯ. ಇಲ್ಲಿನ ಸಲ್ಲಾಪುರಮ್ಮ ದೇವರ ಮೂರ್ತಿಯನ್ನು ಪೂಜಾರಿಗಳು ತಲೆಯ ಮೇಲೆ ಹೊತ್ತುಕೊಂಡು ಆವಣಿಗೆ ಹೋದರೆ ಮಾತ್ರ ಶಿವರಾತ್ರಿ ಸಮಯದಲ್ಲಿ ಅಲ್ಲಿ ಪೂಜೆ ಪುನಸ್ಕಾರ
ನಡೆಯುತ್ತದೆ.

ಆವಣಿ ಜಾತ್ರೆಗೆ ಹದಿನೈದು ದಿನಗಳ ಮೊದಲು ಇಲ್ಲಿ ಜಾತ್ರೆ ಮತ್ತು ಉಟ್ಲು ಮಹೋತ್ಸವ ನಡೆಯುವುದು ವಾಡಿಕೆ. ಹಲವು ವರ್ಷಗಳಿಂದಲೂ ಇದು ನಡೆದುಕೊಂಡು ಬಂದಿದೆ. ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಜಾತ್ರಾ ಮಹೋತ್ಸವ ಪ್ರಯುಕ್ತ ದೇವಿಯ ಮೂಲ ವಿಗ್ರಹವನ್ನು ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ತಂಬಿಟ್ಟಿನ ದೀಪಗಳನ್ನು ಹೊತ್ತು ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿದರು.

ಜಾತ್ರೆಯಲ್ಲಿ ಉಟ್ಲು ಕಾಯಿ ಒಡೆಯುವ ಸ್ಪರ್ಧೆ (ಹಗ್ಗದಲ್ಲಿ ಕಟ್ಟಿರುವ ತೆಂಗಿನಕಾಯಿ) ನಡೆಯಿತು. ಈ ಸ್ಪರ್ಧೆ ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು. ಕಾಯಿ ಒಡೆದ ಸ್ಪರ್ಧಾಳುಗಳಿಗೆ ಸೂಕ್ತ ಬಹುಮಾನ ನೀಡಲಾಯಿತು.

ಮಾಜಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಹಾಗೂ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಮೃದ್ಧಿ ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.