ADVERTISEMENT

ಕೋಲಾರ: ಗಮನ ಸೆಳೆಯುತ್ತಿರುವ ಸಾಲುಮರದ ತಿಮ್ಮಕ್ಕನ ಮರಳು ಕಲಾಕೃತಿ

ಫಲಪುಷ್ಪ ಪ್ರದರ್ಶನ, ಮರಳಾಕೃತಿಯಲ್ಲಿ ಮೂಡಿ ಬರಲಿದ್ದಾರೆ ಸಾಲು‌ಮರದ ತಿಮ್ಮಕ್ಕ

ಕೆ.ಓಂಕಾರ ಮೂರ್ತಿ
Published 25 ಜನವರಿ 2026, 5:30 IST
Last Updated 25 ಜನವರಿ 2026, 5:30 IST
ಕೋಲಾರದಲ್ಲಿ ಜ.26ರಂದು ಆರಂಭವಾಗಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯಲಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಕಲಾಕೃತಿ
ಕೋಲಾರದಲ್ಲಿ ಜ.26ರಂದು ಆರಂಭವಾಗಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯಲಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಕಲಾಕೃತಿ    

ಕೋಲಾರ: ಗಿಡಮರಗಳನ್ನೇ ಮಕ್ಕಳೆಂದು ಭಾವಿಸಿ ಪರಿಸರ ಪ್ರೀತಿ ಕಟ್ಟಿಕೊಟ್ಟ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ‌ಮತ್ತೊಮ್ಮೆ ನಮ್ಮ ಕಣ್ಮುಂದೆ ಬರಲಿದ್ದಾರೆ! ತಿಮ್ಮಕ್ಕನನ್ನು ನೋಡಿ ಒಂದಿಷ್ಟಾದರೂ ‘ಪರಿಸರ ಪ್ರೀತಿ’ಯ ಭಾವವನ್ನು ಎದೆಗಿಳಿಸಿಕೊಳ್ಳಬಹುದು.

ಅಂದಹಾಗೆ, ಉಸಿರು ನಿಲ್ಲಿಸಿದ್ದರೂ ಪರಿಸರ ಪ್ರೀತಿ ಮೂಲಕ ಹಸಿರಾಗಿರುವ ಸಾಲುಮರದ ತಿಮ್ಮಕ್ಕ ಅವರ ಮರಳಿನ ಕಲಾಕೃತಿಯನ್ನು ನಗರದಲ್ಲಿ ರಚಿಸಿದ್ದು, ಗಮನ ಸೆಳೆಯುತ್ತಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ನಡೆಯಲಿರುವ ‌ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನದಲ್ಲಿ ಈ ಕಲಾಕೃತಿ ನಿರ್ಮಿಸಲಾಗಿದೆ. ಗಣರಾಜ್ಯೋತ್ಸವ ದಿನವಾದ ಜ.26ರಂದು ಜಿಲ್ಲಾ ತೋಟಗಾರಿಕೆ ನರ್ಸರಿ ಆವರಣದಲ್ಲಿ ಪ್ರದರ್ಶನ ಆರಂಭವಾಗಲಿದ್ದು, 28ರವರೆಗೆ ನಡೆಯಲಿದೆ.

ADVERTISEMENT

ಇದಷ್ಟೇ ಅಲ್ಲ; ಈ ಮೂರು ದಿನ ಹೂಗಳ ಲೋಕ ನೋಡುಗರನ್ನು ಬರಸೆಳೆಯಲಿದೆ. ಲಕ್ಷಾಂತರ ಹೂವುಗಳ ಸೌಂದರ್ಯ ಲೋಕ ತೆರೆದುಕೊಳ್ಳಲಿದೆ. ವಿವಿಧ ಹೂ ಹಣ್ಣು ಹಾಗೂ ತರಕಾರಿಗಳಿಂದ ಅಪರೂಪದ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ‌ಕಣ್ಣಿಗೆ ಆನಂದ ನೀಡುವ, ಮನಸ್ಸನ್ನು ಪ್ರಫುಲ್ಲಗೊಳಿಸುವ ಹೂ ಗಿಡಗಳು ಇರಲಿವೆ.

ಹೂಗಳಿಂದ ಅಲಂಕರಿಸಿದ ಹಸು-ಕರು, ರೈತ ಮಹಿಳೆ, ನವಿಲಿ, ಚಿಟ್ಟೆ, ಹಣ್ಣು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳು ಮೂಡಿಬರಲಿವೆ. ಜಾನೂರ್ ಕಲಾಕೃತಿಗಳ ಪ್ರದರ್ಶನ, ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ತಯಾರಿಸಲಾದ ಸಾವಯವ ಪರಿಕರಗಳ ಪ್ರದರ್ಶನವಿರಲಿದೆ. ಔಷಧಿ ಹಾಗೂ ಸುಗಂಧ ದ್ರವ್ಯ ಸಸಿಗಳ ಪ್ರಾತ್ಯಕ್ಷತೆ ನಡೆಯಲಿದೆ. ಕೋಲಾರ ಅವಿಭಜಿತ ಜಿಲ್ಲೆಯ ಮಹನೀಯರ ಛಾಯಾಚಿತ್ರಗಳು ರಂಗೋಲಿಯಲ್ಲಿ ಮೂಡಿಬರಲಿವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಗಾಥೆಯನ್ನು ಛಾಯಾಚಿತ್ರಗಳ ಮೂಲಕ ಪ್ರದರ್ಶಿಸಲಾಗುತ್ತದೆ.

ವಿದೇಶಿ ಹೂಗಳ ಪ್ರದರ್ಶನ, ಎತ್ತಿನ ಗಾಡಿಯಲ್ಲಿ ಹೂ ಮತ್ತು ತರಕಾರಿಗಳ ಜೋಡಣೆ, ವಿವಿಧ ಅಲಂಕಾರಿಕ ಹೂ ಕುಂಡಗಳ ಜೋಡಣೆ, ಪುಷ್ಟ ರಂಗೋಲಿ ಇರಲಿವೆ. ನುರಿತ ತೋಟಗಾರರಿಂದ ಕಸಿ ಕಟ್ಟುವ ವಿಧಾನದ ಪ್ರಾಯೋಗಿಕ ಪ್ರದರ್ಶನ ನಡೆಯಲಿದೆ. ವಿವಿಧ ಹಣ್ಣಿನ, ಹೂವಿನ ಹಾಗೂ ಅಲಂಕಾರಿಕ ಗಿಡಗಳು ಮತ್ತು ವಿವಿಧ ಕಸಿ ತರಕಾರಿಗಳನ್ನು ಸಸ್ಯ ಸಂತೆ ಮೂಲಕ ಮಾರಾಟ ಮಾಡುವುದು ಮತ್ತು ವಿವಿಧ ಇಲಾಖೆಗಳ ಮಳಿಗೆಗಳು ಫಲಪುಷ್ಪ ಪ್ರದರ್ಶನ ಮಾಡಲಾಗುತ್ತದೆ.

ಜೊತೆಯಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಯಂತ್ರಗಳು, ಉಪಕರಣಗಳು, ಬೀಜ, ಗೊಬ್ಬರ, ಕೀಟನಾಶಕದ ಮಾಹಿತಿಯೂ ಇರಲಿದೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಪ್ರವೇಶ ಉಚಿತವಾಗಿದ್ದು, ಬೆಳಿಗ್ಗೆ 9.30ರಿಂದ ರಾತ್ರಿ 8 ಗಂಟೆ ವರೆಗೆ ತೆರೆದಿರುತ್ತದೆ. ಸೆಲ್ಫಿ ಪಾಯಿಂಟ್‌ ಕೂಡ ಇರಲಿದೆ.

ಫಲಪುಷ್ಪ ಪ್ರದರ್ಶನಕ್ಕೆ ಹೂಕುಂಡಗಳ ಜೋಡಣೆಯಲ್ಲಿ ತೊಡಗಿರುವ ಸಿಬ್ಬಂದಿ
ಫಲಪುಷ್ಪ ಪ್ರದರ್ಶನಕ್ಕೆ ರಂಗೋಲಿಯ ಸೊಬಗು
ಕೋಲಾರದ ಜಿಲ್ಲಾ ತೋಟಗಾರಿಕೆ ನರ್ಸರಿ
ನರ್ಸರಿಯಲ್ಲೇ ಬೆಳೆದ ವಿವಿಧ ಜಾತಿಯ ಸುಮಾರು ಮೂರೂವರೆ ಸಾವಿರ ವಿವಿಧ ಹೂವುಗಳ ಹೂಕುಂಡಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಕಳೆದ ಸಲಕ್ಕಿಂತ ಈ ಬಾರಿ ಭಿನ್ನವಾಗಿರಲಿದೆ
ಎಸ್.ಆರ್‌.ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಕೋಲಾರ

ಕೋಲಾರದಲ್ಲಿ ವೃಕ್ಷಮಾತೆಯ ನೆನಪು

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಕೋಲಾರ ಜಿಲ್ಲೆಯನ್ನು ಬಹಳವಾಗಿ ಇಷ್ಟಪಡುತ್ತಿದ್ದರು. ಅನೇಕ ಬಾರಿ ಭೇಟಿ ಕೂಡ ನೀಡಿ ಪರಿಸರ ಅರಿವು ಮೂಡಿಸಿದ್ದರು. ಪ್ರಮುಖವಾಗಿ ಶಾಶ್ವತ ನೀರಾವರಿ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು. ಶ್ರೀನಿವಾಸಪುರ ತಾಲ್ಲೂಕಿನ ನೀಲ್‌ಬಾಗ್‌ ಆಶ್ರಯ ಶಾಲೆ ಕೋಲಾರದ ನೂತನ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಬಂದಿದ್ದರು. ಅವರು ಆವರಣದಲ್ಲಿ ಅಂದು ನೆಟ್ಟ ಗಿಡಗಳು ಈಗ ಮರಗಳಾಗಿದ್ದು ನೂರೊಂದು ನೆನಪು ಕಟ್ಟಿಕೊಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.