ADVERTISEMENT

ಕೋಲಾರ | 9 ತಿಂಗಳಿಂದ ವೇತನವಿಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 5:03 IST
Last Updated 23 ಆಗಸ್ಟ್ 2025, 5:03 IST
ಕೋಲಾರ ನಗರಸಭೆ ಕಚೇರಿ
ಕೋಲಾರ ನಗರಸಭೆ ಕಚೇರಿ   

ಕೋಲಾರ: ಕಳೆದ 9 ತಿಂಗಳಿನಿಂದ ವೇತನ ಸಿಗದೆ ಕೋಲಾರ ನಗರಸಭೆಯ 74 ಹೊರಗುತ್ತಿಗೆ ಪೌರಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಸದ ವಾಹನ ಚಾಲಕರು, ಯುಜಿಡಿ ವಾಹನ ಚಾಲಕರು, ಕಸ ತುಂಬುವವರು (ಲೋಡರ್ಸ್‌), ಸ್ಯಾನಿಟೈರ್ಸ್ ಸೂಪರ್‌ವೈಸರ್‌ಗಳು, ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು ಹಾಗೂ ಇನ್ನಿತರ ಪೌರಕಾರ್ಮಿಕರು ಹಲವಾರು ಬಾರಿ ಒತ್ತಾಯಿಸಿದ್ದು, ಸ್ಪಂದನೆ ಸಿಗುತ್ತಿಲ್ಲ.

ಮೂರ್ನಾಲ್ಕು ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ನಿತ್ಯ ಮುಂಜಾನೆ 5.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಲಾರ ನಗರದ 35 ವಾರ್ಡ್‌ಗಳನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿದ್ದಾರೆ.

ADVERTISEMENT

ಮುಂದಿನ ವಾರ ಗೌರಿ ಗಣೇಶ ಹಬ್ಬವಿದ್ದು, ಅದರೊಳಗಾದರೂ ವೇತನ ನೀಡುವಂತೆ ಈ ಸ್ವಚ್ಛತಾ ಕಾರ್ಮಿಕರು ಆಗ್ರಹಿಸಿದ್ದಾರೆ. ಕನಿಷ್ಠ ಮೂರ್ನಾಲ್ಕು ತಿಂಗಳ ವೇತನವನ್ನಾದರೂ ನೀಡದಿದ್ದರೆ ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ, ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಸದಸ್ಯರು, ಜಿಲ್ಲಾ ನಗರಾಭಿವೃದ್ಧಿ ಕಚೇರಿಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

‘ಹಲವಾರು ಬಾರಿ ಹಿಂದಿನ ಪೌರಾಯುಕ್ತರು, ಈಗಿನ ಪೌರಾಯುಕ್ತರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ. ತಿಂಗಳುಗಟ್ಟಲೇ ವೇತನವಿಲ್ಲದೆ ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದೇವೆ. ಆದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಹೊರಗುತ್ತಿಗೆ ಪೌರಕಾರ್ಮಿಕರು ದೂರಿದ್ದಾರೆ.

‘ಕಳೆದ ತಿಂಗಳ 28ರಂದು ಪೌರಾಯುಕ್ತರು ಹಾಗೂ ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ಕೂಡ ನಡೆದಿತ್ತು. ಗಣೇಶ ಚತುರ್ಥಿ ಹಬ್ಬದೊಳಗೆ 4 ತಿಂಗಳ ವೇತನವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಇನ್ನುಳಿದ ಕುಂದುಕೊರತೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗುವುದೆಂದು ಹೇಳಿದ್ದರು. ಆದರೆ, ಈವರೆಗೆ ನಮಗೆ ವೇತನ ಸಿಕ್ಕಿಲ್ಲ. ಬಡ ಕಾರ್ಮಿಕರಾದ ನಮಗೆ ಅನ್ಯಾಯವಾಗುತ್ತಿದ್ದು, ಕುಟುಂಬ ಪೋಷಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ’ ಎಂದಿದ್ದಾರೆ.

‘ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ವೇತನ ನೀಡಬೇಕು. ಇಲ್ಲವಾದಲ್ಲಿ ಮತ್ತೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ನಮ್ಮ ಸಮಸ್ಯೆಗಳನ್ನು ಅವರ ಗಮನಕ್ಕೆ ತರುತ್ತೇವೆ. ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸುತ್ತೇವೆ’ ಎಂದು ಹೇಳಿದ್ದಾರೆ.

‘ಆಗಲೂ ವೇತನ ಸಿಗದಿದ್ದರೆ ಎಲ್ಲಾ ಕಾರ್ಮಿಕರು ನ್ಯಾಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ. ನಮ್ಮ ಕೆಲಸ ‌ಸ್ಥಗಿತಗೊಳಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ, ನಗರದಲ್ಲಿ ಅನೈರ್ಮಲ್ಯ ಉಂಟಾಗುತ್ತದೆ. ಆಗ ನಗರಸಭೆ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ’ ಎಂದಿದ್ದಾರೆ.

ಕೂಡಲೇ ನಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಪರಿಶೀಲಿಸಿ ವೇತನವನ್ನು ಬಿಡುಗಡೆ ಮಾಡಲು ಕ್ರಮವಹಿಸಬೇಕೆಂದು ಮನವಿ ಮಾಡಿದ್ದಾರೆ.

ಇತ್ತ ಆರ್ಥಿಕ ಸಂಕಷ್ಟದಲ್ಲಿರುವ ಕೋಲಾರ ನಗರಸಭೆ ಅಧಿಕಾರಿಗಳು ಕೂಡ ಹಣ ಹೊಂದಿಸಲು ಪರದಾಡುತ್ತಿರುವುದು ಗೊತ್ತಾಗಿದೆ. ಸರಿಯಾಗಿ ತೆರಿಗೆ ಸಂಗ್ರಹವಾಗದಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ.

ಕೋಲಾರದಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದ ಪೌರಕಾರ್ಮಿಕರು
ಕೋಲಾರದಲ್ಲಿ ಸ್ವಚ್ಛತೆಯಲ್ಲಿ ತೊಡಗಿದ್ದ ಪೌರಕಾರ್ಮಿಕರು

ಸಂಸಾರ ಮಕ್ಕಳು ಗತಿ ಏನು? 74 ಹೊರಗುತ್ತಿಗೆ ನೌಕರರು 9 ತಿಂಗಳಿನಿಂದ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಹಲವರು ಸಾಲಗಾರರಿದ್ದಾರೆ. ಅವರ ಸಂಸಾರ ಮಕ್ಕಳು ಗತಿ ಏನು? ಕಡೇ ಪಕ್ಷ ಮೂರ್ನಾಲ್ಕು ತಿಂಗಳ ವೇತನವನ್ನಾದರೂ ನೀಡಿದರೆ ಸುಧಾರಿಸಿಕೊಳ್ಳುತ್ತಾರೆ. ಇಷ್ಟಾಗಿಯೂ ಏಕಾಏಕಿ ಧರಣಿ ನಡೆಸದೆ ಎಲ್ಲರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಯ ಕೊಡುತ್ತೇವೆ. ಆಗಲೂ ಕೊಡದಿದ್ದರೆ ಹೋರಾಟ ಮಾಡಲಾಗುವುದು. ಈಗಲೇ ಧರಣಿ ನಡೆಸಿದರೆ ಸಾರ್ವಜನಕರಿಗೆ ತೊಂದರೆ ಆಗುತ್ತದೆ ಸಿ.ಎಸ್‌.ಮಂಜುನಾಥ್‌ ಜಿಲ್ಲಾ ಪೌರಕಾರ್ಮಿಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.