ಕೋಲಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದೆಯೇ ಎಂಬ ಪ್ರಶ್ನೆಗೆ, ಇನ್ನು ಆರು ತಿಂಗಳಲ್ಲಿ ಪ್ರಧಾನಿಯ ಬದಲಾವಣೆ ಆಗಲಿದೆ ನೋಡುತ್ತಿರಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನಕ್ಕೆ ನೀರು ಕೊಡಲ್ಲ, ಒಡನಾಟ ಬೇಡ, ಸಿನಿಮಾ ಬೇಡ ಎನ್ನುವವರು ಅವರ ಎದುರು ಕ್ರಿಕೆಟ್ ಆಡಲು ಒಪ್ಪಿರುವುದು ಏಕೆ ಎಂದು ಪ್ರಶ್ನಿಸಿದರು.
ಹಿಂದೂ, ಮುಸ್ಲಿಂ ಗಲಾಟೆ ಬಿಟ್ಟರೆ ಬಿಜೆಪಿ ಏನೂ ಮಾಡುತ್ತಿಲ್ಲ. ಪದೇಪದೇ ಹಿಂದುತ್ವ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ, ಬಿಜೆಪಿ ಮುಖಂಡರು ಬಡವರಿಗೆ ತಮ್ಮ ಆಸ್ತಿ ಕೊಡಲಿ ಎಂದು ತಿರುಗೇಟು ನೀಡಿದರು.
ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ, ಬಿಜೆಪಿ ನಾಯಕರ ಮಕ್ಕಳು ಯಾವ ಪ್ರತಿಭಟನೆಗೆ ಬಂದಿದ್ದಾರೆ? ದೇವಸ್ಥಾನಗಳನ್ನು ಕಟ್ಟಿಸಿದ್ದು ನಾವು. ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಕೇಳಿದರು.
ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ನೀಡಿರುವ ಹೇಳಿಕೆ ಕುರಿತು, 'ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು.
ಅವರ ಬಗ್ಗೆ ನನಗೆ ಗೌರವ ಇದೆ. ನಮ್ಮ ಶಾಸಕ ಆ ರೀತಿ ಮಾತನಾಡಬಾರದೇ' ಎಂದು ಪ್ರಶ್ನಿಸಿದರು.
ದೇಶದಲ್ಲಿ ಈಗ ಇರುವುದು ಕರ್ನಾಟಕ ಮಾಡೆಲ್ ಮಾತ್ರ. ಗುಜರಾತ್ ಮಾಡೆಲ್ ಇಲ್ಲ. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಆರ್ಥಿಕವಾಗಿ ನಂಬರ್ 1 ಸ್ಥಾನದಲ್ಲಿದೆ. ಗ್ಯಾರಂಟಿಗೆ ವರ್ಷಕ್ಕೆ ₹ 60 ಸಾವಿರ ಕೋಟಿ ನೀಡಿ ಅಭಿವೃದ್ಧಿಗೆ ₹ 83 ಸಾವಿರ ಕೋಟಿ ನೀಡಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.