ADVERTISEMENT

ಇಂಧನ ಉಳಿಸಿ ಆರ್ಥಿಕ ಸಂಪನ್ಮೂಲ ವೃದ್ಧಿಸಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 15:50 IST
Last Updated 15 ಫೆಬ್ರುವರಿ 2019, 15:50 IST
ಇಂಧನ ಉಳಿತಾಯ ಸಪ್ತಾಹದ ಅಂಗವಾಗಿ ಕೋಲಾರದಲ್ಲಿ ಶುಕ್ರವಾರ ನಡೆದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡ ಮಕ್ಕಳು ಹಾಗೂ ಗಣ್ಯರು ಇಂಧನ ಉಳಿಸುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಇಂಧನ ಉಳಿತಾಯ ಸಪ್ತಾಹದ ಅಂಗವಾಗಿ ಕೋಲಾರದಲ್ಲಿ ಶುಕ್ರವಾರ ನಡೆದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡ ಮಕ್ಕಳು ಹಾಗೂ ಗಣ್ಯರು ಇಂಧನ ಉಳಿಸುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.   

ಕೋಲಾರ: ‘ಬೇರೆ ರಾಷ್ಟ್ರಗಳಿಂದ ದೇಶಕ್ಕೆ ಇಂಧನ ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಆರ್ಥಿಕ ಸಂಪತ್ತು ಹೊರ ರಾಷ್ಟ್ರಗಳಿಗೆ ಹರಿದು ಹೋಗುತ್ತಿದೆ. ಇಂಧನ ಉಳಿಸುವ ಮೂಲಕ ದೇಶದ ಆರ್ಥಿಕ ಸಂಪನ್ಮೂಲ ವೃದ್ಧಿಸಬೇಕು’ ಎಂದು ನಗರ ಠಾಣೆ ಎಸ್‌ಐ ಅಣ್ಣಯ್ಯ ಹೇಳಿದರು.

ಇಂಧನ ಉಳಿತಾಯ ಸಪ್ತಾಹದ ಅಂಗವಾಗಿ ಇಲ್ಲಿ ಶುಕ್ರವಾರ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಅರ್ಧ ಕಿಲೋ ಮೀಟರ್‌ ಹೋಗುವುದಕ್ಕೂ ವಾಹನ ಬಳಸುವುದು ಬೇಸರದ ಸಂಗತಿ. ತೈಲೋತ್ಪನ್ನಗಳು ಮುಗಿದು ಹೋಗುವ ಸಂಪನ್ಮೂಲಗಳು. ಈ ಸಂಪನ್ಮೂಲವನ್ನು ಹಿತಮಿತವಾಗಿ ಬಳಸದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ’ ಎಂದು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಇಂಧನ ಉಳಿಸುವ ಅನಿವಾರ್ಯತೆ ಎದುರಾಗಿದೆ. ಕಡಿಮೆ ದೂರವಿದ್ದರೆ ನಡೆದು ಹೋಗುವುದು ಸೂಕ್ತ. ಇದರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ಇಂಧನ ಉಳಿತಾಯವಾಗುತ್ತದೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ಮತ್ತು ದೂರದ ಪ್ರಯಾಣಕ್ಕೆ ಮಾತ್ರ ಸ್ವಂತ ವಾಹನ ಬಳಸಬೇಕು. ಸಮೂಹ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವುದು ಒಳ್ಳೆಯದು’ ಎಂದು ಸಲಹೆ ನೀಡಿದರು.

ADVERTISEMENT

‘ದೇಶದೆಲ್ಲೆಡೆ ಕಂಪನಿ ವತಿಯಿಂದ ಇಂಧನ ಉಳಿಸುವುದು, ಪರಿಸರ ರಕ್ಷಣೆ ಕುರಿತು ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಇಂಧನ ಉಳಿಸುವುದು ಎಲ್ಲರ ಜವಾಬ್ದಾರಿ’ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಾರುಕಟ್ಟೆ ವ್ಯವಸ್ಥಾಪಕ ಶ್ರೀನಿವಾಸ್ ನಾಗಿರೆಡ್ಡಿ ಕಿವಿಮಾತು ಹೇಳಿದರು.

ಶಾಲಾ ಮಕ್ಕಳು ಇಂಧನ ಉಳಿಸಿ- ದೇಶ ಮತ್ತು ಪರಿಸರ ರಕ್ಷಿಸಿ ಎಂಬ ಘೋಷಣೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಇದಕ್ಕೂ ಮುನ್ನ ಶಾಲಾ ಮಕ್ಕಳು ಮತ್ತು ಗಣ್ಯರು ಇಂಧನ ಉಳಿಸುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.