ADVERTISEMENT

ತರಗತಿಗಳು ಪುನರಾರಂಭ: ಚಿಣ್ಣರ ಕಲರವ; ಹಬ್ಬದ ಸಂಭ್ರಮ

ಎಲ್‌ಕೆಜಿ–ಯುಕೆಜಿ ಆರಂಭ: ಕೋವಿಡ್‌ ಮಾರ್ಗಸೂಚಿ ಪಾಲನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 15:42 IST
Last Updated 8 ನವೆಂಬರ್ 2021, 15:42 IST
ಕೋಲಾರದ ಚಿನ್ಮಯ ಶಾಲೆಯಲ್ಲಿ ಸೋಮವಾರ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಪುನರಾರಂಭವಾಗಿದ್ದು, ಮಕ್ಕಳು ಪೋಷಕರೊಂದಿಗೆ ಶಾಲೆಗೆ ಬಂದರು
ಕೋಲಾರದ ಚಿನ್ಮಯ ಶಾಲೆಯಲ್ಲಿ ಸೋಮವಾರ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಪುನರಾರಂಭವಾಗಿದ್ದು, ಮಕ್ಕಳು ಪೋಷಕರೊಂದಿಗೆ ಶಾಲೆಗೆ ಬಂದರು   

ಕೋಲಾರ: ಕೋವಿಡ್‌ ಕಾರಣಕ್ಕೆ ಸುಮಾರು ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಪ್ರಾಥಮಿಕ ಹಾಗೂ ಪೂರ್ವ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಸೋಮವಾರ ಪುನರಾರಂಭವಾದವು.

ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ತರಗತಿಗಳನ್ನು ಆರಂಭಿಸಿದ್ದು, ಮಕ್ಕಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶಿಕ್ಷಕರು ಶಾಲೆಗಳನ್ನು ಸಿಂಗರಿಸಿ ವಿದ್ಯಾರ್ಥಿಗಳನ್ನು ಪ್ರವೇಶ ದ್ವಾರದಲ್ಲೇ ಸ್ವಾಗತಿಸಿದರು.

ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಹಬ್ಬದ ಸಂಭ್ರಮ ಕಂಡುಬಂದಿತು. ಶಿಕ್ಷಕರು ಮಕ್ಕಳಿಗೆ ಸಿಹಿ ತಿನಿಸು, ಲೇಖನಿ ಸಾಮಗ್ರಿ, ಹೂವು ನೀಡಿ ಆತ್ಮಿಯವಾಗಿ ಬರ ಮಾಡಿಕೊಂಡರು. ಶಾಲಾ ಆವರಣ ಮತ್ತು ತರಗತಿಗಳಲ್ಲಿ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಶಿಕ್ಷಕರು ತರಗತಿಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ADVERTISEMENT

ಪೋಷಕರೊಂದಿಗೆ ಬಂದ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ನೀಡಲಾಯಿತು. ಶಾಲೆಗಳ ಪ್ರತಿ ಕೊಠಡಿಯನ್ನು ಬೆಳಿಗ್ಗೆಯೇ ಸ್ವಚ್ಛಗೊಳಿಸಿ ಸ್ಯಾನಿಟೈಸ್‌ ಮಾಡಲಾಯಿತು. ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ ಶಾಲೆಗೆ ಬಂದಿದ್ದರು. ವಿದ್ಯಾರ್ಥಿಗಳಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ತರಗತಿಗಳಲ್ಲಿ ಮೇಜುಗಳ ವ್ಯವಸ್ಥೆ ಮಾಡಲಾಗಿತ್ತು.

ಶಿಕ್ಷಣ ಇಲಾಖೆ ಅಧಿಕಾರಿಗಳು ಹಲವು ಶಾಲೆಗಳಿಗೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದರು. ಸರ್ಕಾರದ ಆದೇಶದಂತೆ ಅರ್ಧ ದಿನವಷ್ಟೇ ತರಗತಿ ನಡೆಸಲಾಯಿತು. ಎರಡು ಡೇಸ್‌ ಕೋವಿಡ್‌ ಲಸಿಕೆ ಪಡೆದ ಶಿಕ್ಷಕರು ಮತ್ತು ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾದರು. ಶಾಲಾ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಮಾಸ್ಕ್‌ ಧರಿಸಿಯೇ ಕರ್ತವ್ಯ ನಿರ್ವಹಿಸಿದರು.

ಒಪ್ಪಿಗೆ ಪತ್ರ: ಬಹುತೇಕ ಮಕ್ಕಳು ಪೋಷಕರ ಒಪ್ಪಿಗೆ ಪತ್ರದೊಂದಿಗೆ ಶಾಲೆಗೆ ಹಾಜರಾದರು. ಶಿಕ್ಷಕರು ಒಪ್ಪಿಗೆ ಪತ್ರ ಪರಿಶೀಲಿಸಿದ ನಂತರವಷ್ಟೇ ಮಕ್ಕಳಿಗೆ ಪ್ರವೇಶಾತಿ ನೀಡಿದರು. ಮಕ್ಕಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ಹೊರತುಪಡಿಸಿ ಇತರರಿಗೆ ಶಾಲಾ ಆವರಣಕ್ಕೆ ಪ್ರವೇಶ ನಿರಾಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.