ADVERTISEMENT

ಬಾಗಿಲು ತೆರೆದ ಶಾಲೆ; ಹಾಜರಾತಿ ಕಡಿಮೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 17:10 IST
Last Updated 6 ಸೆಪ್ಟೆಂಬರ್ 2021, 17:10 IST
ಕೋಲಾರ ಜಿಲ್ಲೆಯಲ್ಲಿ ಸೋಮವಾರ 6ರಿಂದ 8ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದ್ದು, ಶಾಲೆಯೊಂದರಲ್ಲಿ ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಯಿತು
ಕೋಲಾರ ಜಿಲ್ಲೆಯಲ್ಲಿ ಸೋಮವಾರ 6ರಿಂದ 8ನೇ ತರಗತಿವರೆಗೆ ಶಾಲೆಗಳು ಆರಂಭವಾಗಿದ್ದು, ಶಾಲೆಯೊಂದರಲ್ಲಿ ತರಗತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಲಾಯಿತು   

ಕೋಲಾರ: ಕೋವಿಡ್‌ ಕಾರಣಕ್ಕೆ ತರಗತಿಗಳು ನಡೆಯದೆ ಒಂದೂವರೆ ವರ್ಷದಿಂದ ಭಣಗುಡುತ್ತಿದ್ದ ಶಾಲೆ ಅಂಗಳದಲ್ಲಿ ಸೋಮವಾರ ಮಕ್ಕಳ ಕಲರವ ಕಂಡುಬಂತು. ವಿದ್ಯಾರ್ಥಿಗಳು ಆವರಣದಲ್ಲಿ ಅತ್ತಿಂದಿತ್ತ ಓಡಾಡುತ್ತಾ, ಸ್ನೇಹಿತರು, ಶಿಕ್ಷಕರ ಜೊತೆ ಸಂಭ್ರಮಿಸಿದರು.

ಜಿಲ್ಲೆಯಾದ್ಯಂತ ಸೋಮವಾರ 6ನೇ ತರಗತಿಯಿಂದ 8ನೇ ತರಗತಿ ಆರಂಭವಾಗಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಲವಲವಿಕೆಯಿಂದ ಶಾಲೆಗೆ ಬಂದರು.

ಶಾಲೆಗಳ ಮುಖ್ಯದ್ವಾರದಲ್ಲಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಕೊಠಡಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂವು ನೀಡಿ, ಆರತಿ ಮಾಡಿ ಸ್ವಾಗತಿಸಿದರು. ಕೆಲ ಶಾಲೆಗಳಲ್ಲಿ ಶಿಕ್ಷಕರು ಸಿಹಿ ತಿನಿಸಿನೊಂದಿಗೆ ಪೆನ್‌ ಹಾಗೂ ಪುಸ್ತಕ ವಿತರಿಸಿದರು. ಕೆಲ ಪೋಷಕರು ತಾವೇ ಮಕ್ಕಳನ್ನು ಕರೆತಂದರು.

ADVERTISEMENT

ಇಷ್ಟುದಿನ ಆನ್‌ಲೈನ್‌ನಲ್ಲಿ ಪಾಠ ಕೇಳುತ್ತಿದ್ದ ಮಕ್ಕಳು ಸೋಮವಾರ ಖುದ್ದು ಭೌತಿಕ ತರಗತಿಗಳಿಗೆ ಹಾಜರಾದರು. ಬಹುತೇಕ ಮಕ್ಕಳು ಮಾಸ್ಕ್‌ ಧರಿಸಿ ಬಂದಿದ್ದರು. ಬಾಗಿಲಲ್ಲೇ ನಿಂತ ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿದರು. ಶಾಲೆ ಆರಂಭದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮ ಕೈಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕೊಠಡಿಗಳನ್ನು ಭಾನುವಾರವೇ ಸ್ಯಾನಿಟೈಸ್‌ ಮಾಡಲಾಗಿತ್ತು. ಒಂದೊಂದು ಡೆಸ್ಕ್‌ಗೆ ಇಬ್ಬಿಬ್ಬರಂತೆ ವಿದ್ಯಾರ್ಥಿಗಳನ್ನು ಅಂತರದಲ್ಲಿ ಕೂರಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಹಾಜರಾತಿ ಕಡಿಮೆ: ಕೋವಿಡ್‌ ಕಾರಣಕ್ಕೆ ಮಕ್ಕಳಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಮೊದಲ ದಿನವಾದ ಕಾರಣ ಬಹುತೇಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿತ್ತು. ಭೌತಿಕ ತರಗತಿಗಳ ಜತೆಗೆ ಆನ್‌ಲೈನ್‌ ತರಗತಿಗಳಿಗೂ ಅವಕಾಶ ಇರುವುದರಿಂದ ಕೆಲ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮನಸ್ಸು ಮಾಡಲಿಲ್ಲ.

ಭೌತಿಕ ತರಗತಿಗೆ ಹಾಜರಾಗಬೇಕೆಂದರೆ ಪೋಷಕರ ಒಪ್ಪಿಗೆ ಪತ್ರ ಹಾಗೂ ಕೋವಿಡ್‌ ನಿಯಮ ಪಾಲನೆ ಕುರಿತು ಒಪ್ಪಿಗೆ ಪತ್ರ ಬರೆಸಿ ಸಹಿ ತೆಗೆದುಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಸಿಬ್ಬಂದಿಯು ತರಗತಿಯ ಒಳ ಹೋಗಲು ಬಿಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.