ADVERTISEMENT

ವೃತ್ತಿ ಕೌಶಲದಿಂದ ಸ್ವಾವಲಂಬಿ ಜೀವನ

ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ರಾಜೇಂದ್ರ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 13:28 IST
Last Updated 3 ಅಕ್ಟೋಬರ್ 2019, 13:28 IST
ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ಉದ್ಯಮಶೀಲತೆ ಜಾಗೃತಿ ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಮಾತನಾಡಿದರು.
ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ಉದ್ಯಮಶೀಲತೆ ಜಾಗೃತಿ ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಮಾತನಾಡಿದರು.   

ಕೋಲಾರ: ‘ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ವೃತ್ತಿ ಕೌಶಲ ತರಬೇತಿ ಪಡೆದರೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬಹುದು’ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ರಾಜೇಂದ್ರ ಕಿವಿಮಾತು ಹೇಳಿದರು.

ಕಲೆಕ್ಟಿವ್ ಆ್ಯಕ್ಷನ್ ನೆಟ್‌ವರ್ಕ್ (ಕ್ಯಾನ್) ಸಂಸ್ಥೆಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉದ್ಯಮಶೀಲತೆ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳು ಸರ್ಕಾರಿ ಕೆಲಸಕ್ಕಷ್ಟೇ ಸೇರಬೇಕೆಂಬ ಭಾವನೆಯಿಂದ ಹೊರಬರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಬಯಸಿದ್ದೇ ಬೇಕೆಂದರೆ ಸಿಗುವುದು ಕಷ್ಟ’ ಎಂದರು.

‘ತರಗತಿಯಲ್ಲಿ ಭೋದನೆ ಮೂಲಕ ಸಾಕಷ್ಟು ಕಲಿತರೂ ಪ್ರಾಯೋಗಿಕವಾಗಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳಲು ಕೌಶಲ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಉತ್ತಮ ಫಲಿತಾಂಶ ಪಡೆದ ಮಾತ್ರಕ್ಕೆ ಕೆಲಸ ಸಿಗುವುದಿಲ್ಲ. ಕೆಲಸಕ್ಕಾಗಿ ಯಾವುದೇ ಕ್ಷೇತ್ರದ ಸಂಸ್ಥೆಗೆ ಅರ್ಜಿ ಹಾಕಿದ ನಂತರ ಸಂದರ್ಶನಕ್ಕೆ ಕರೆಯುತ್ತಾರೆ. ಆ ಸಂಸ್ಥೆಯ ಪ್ರತಿನಿಧಿಗಳು ಕೌಶಲದ ಬಗ್ಗೆ ಗಮನಿಸುತ್ತಾರೆ. ಅವರಿಗೆ ಸಮಾಧಾನವಿಲ್ಲದಿದ್ದರೆ ಉದ್ಯೋಗ ಕೊಡುವುದಿಲ್ಲ’ ಎಂದು ಹೇಳಿದರು.

‘ಸಂಪ್ರದಾಯ ನಂಬಿಕೊಂಡು ಹೋದರೆ ಅವಕಾಶ ಸಿಗದೆ ವಂಚನೆಗೆ ಒಳಗಾಗಬೇಕಾಗುತ್ತದೆ. ಬದಲಾವಣೆಗೆ ಅನುಗುಣವಾಗಿ ಮನಸ್ಥಿತಿ ಬದಲಾಗಬೇಕು. ಸಿಕ್ಕ ಅವಕಾಶ ಬಳಸಿಕೊಂಡು ಮುಂದೆ ಬರಬೇಕು. ಅದು ಬಿಟ್ಟು ನನಗೆ ಕೆಲಸ ಸಿಗುವುದಿಲ್ಲ ಎಂದು ಮನೆಯಲ್ಲೇ ಇದ್ದರೆ ಏನು ಪ್ರಯೋಜನ ಆಗುವುದಿಲ್ಲ’ ಎಂದರು.

ಮಾರ್ಗದರ್ಶನ: ‘ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜುವರೆಗೆ ಒಂದು ರೀತಿಯ ವಾತಾವರಣ ನೋಡಿರುತ್ತೀರಿ. ಆ ನಂತರ ಹೊಸ ಪ್ರಪಂಚದ ಪರಿಚಯವಾಗುತ್ತದೆ’ ಎಂದು ಕ್ಯಾನ್ ಸಂಸ್ಥೆ ಮುಖ್ಯಸ್ಥ ಎಂ.ವಿ.ನರಸಿಂಹರಾವ್ ಅಭಿಪ್ರಾಯಪಟ್ಟರು.

‘ತರಗತಿಯಲ್ಲಿ ವಿಚಾರಗಳ ಬಗ್ಗೆ ಕಲಿತರೆ ಪ್ರಾಯೋಗಿಕವಾಗಿ ಮಾಡಬೇಕಾದ ಕೆಲಸದ ಕುರಿತು ತರಬೇತಿ ನೀಡಲಾಗುತ್ತದೆ. ಮತ್ತೊಬ್ಬರ ಅವಲಂಬನೆಯಿಂದ ಜೀವನ ರೂಪಿಸಿಕೊಳ್ಳುವುದು ಕಷ್ಟ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಮಾರ್ಗಗಳಿದ್ದು, ಆ ಬಗ್ಗೆ ಮಾರ್ಗದರ್ಶನ ನೀಡುತ್ತೇವೆ’ ಎಂದು ವಿವರಿಸಿದರು.

ತರಬೇತಿ ಮುಖ್ಯ: ‘ಜೀವನದಲ್ಲಿ ಪ್ರತಿಯೊಬ್ಬರಿಗೂ ಹಣ ಬೇಕು. ಹಣ ಸಂಪಾದನೆಗೆ ಅನೇಕ ಅವಕಾಶಗಳಿದ್ದು, ಅದರ ಅರಿವು ಪಡೆದರೆ ಮಾತ್ರ ಸ್ವಾವಲಂಬಿಗಳಾಗಿ ಜೀವನ ನಡೆಸಬಹುದು’ ಎಂದು ಸಂಪನ್ಮೂಲ ವ್ಯಕ್ತಿ ಪೋನಿ ಆಲ್ವ ಹೇಳಿದರು.

‘ಸಣ್ಣ ವ್ಯಾಪಾರ ನಡೆಸುವವರನ್ನೂ ಸ್ವಾವಲಂಬಿಗಳು ಎನ್ನುತ್ತಾರೆ. ಉದ್ಯಮ ಕಟ್ಟಿಕೊಂಡು ಕಾರ್ಮಿಕರಿಂದ ಕೆಲಸ ಮಾಡಿಸುವವರನ್ನು ಉದ್ಯಮಿಗಳು ಎನ್ನುತ್ತಾರೆ. ಯಾವುದೇ ಕೆಲಸ ಆರಂಭಿಸಲು ಅಥವಾ ಉದ್ಯೋಗ ಪಡೆಯಲು ಕೌಶಲ ತರಬೇತಿ ಬಹಳ ಮುಖ್ಯ’ ಎಂದು ತಿಳಿಸಿದರು.

ಕ್ಯಾನ್ ಸಂಸ್ಥೆ ಖಜಾಂಚಿ ಶಿಲ್ಪಾ, ಸದಸ್ಯ ಚೌಡಪ್ಪ, ಯುವ ಬರಹಗಾರರ ವೇದಿಕೆ ಅಧ್ಯಕ್ಷ ನಾಗರಾಜ್, ಸಂಪನ್ಮೂಲ ವ್ಯಕ್ತಿ ಶೋಭಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.