ADVERTISEMENT

₹ 36.27 ಲಕ್ಷ ಉಳಿತಾಯ ಬಜೆಟ್‌ ಮಂಡನೆ; ಮಾಂಸದ ಅಂಗಡಿಗಳಿಗೆ ಪ್ರತ್ಯೇಕ ಸ್ಥಳ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 5:11 IST
Last Updated 2 ಏಪ್ರಿಲ್ 2021, 5:11 IST
ಬಂಗಾರಪೇಟೆ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿದರು
ಬಂಗಾರಪೇಟೆ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿದರು   

ಬಂಗಾರಪೇಟೆ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳು ತೆರೆದಿದ್ದು, ಸ್ವಚ್ಛತೆ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಹಾಗಾಗಿ ದೇಶಿಹಳ್ಳಿ ಸರ್ವೆ ನಂಬರ್ 15ರಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಬಳಿಕ ಮಾತನಾಡಿದರು.‌

ಬೇಸಿಗೆ ಆರಂಭವಾಗಿದೆ. ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ADVERTISEMENT

ಪಂಪ್, ಮೋಟಾರ್ ಸಮಸ್ಯೆ ಇದ್ದರೆ ಕೂಡಲೆ ದುರಸ್ತಿ ಮಾಡಿ ಸಮರ್ಪಕ ನೀರು ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಎಲ್ಲಾ ಬಡಾವಣೆಗಳಿಗೆ ಸಮ ಪ್ರಮಾಣದಲ್ಲಿ ನೀರು ಹಂಚಿಕೆಯಾಗಬೇಕು. ತಾರತಮ್ಯ ಆಗಬಾರದು ಎಂದು ಸೂಚಿಸಿದರು.

15 ಹಣಕಾಸು ಮತ್ತು ಸಿಎಫ್ಎಸ್ ಯೋಜನೆಯಡಿ ₹ 1.90 ಕೋಟಿ ಮಂಜೂರಾಗಿದೆ. ಕ್ರಿಯಾ ಯೋಜನೆಗೆ ಅನುಮೋದಿಸಲಾಯಿತು. ಎಸ್‌ಸಿ ಮತ್ತು ಎಸ್‌ಟಿ ಕಾಲೊನಿಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಹಾಗೂ ಸಕ್ಕಿಂಗ್ ಯಂತ್ರ ಖರೀದಿಗೆ ಅನುಮತಿ ಪಡೆಯಲಾಗಿದೆ ಎಂದು ತಿಳಿಸಿದರು.

ಬಜೆಟ್: ಪುರಸಭೆಯ ₹ 36.27 ಲಕ್ಷ ಉಳಿತಾಯ ಬಜೆಟ್ ಅನ್ನು ಸ್ಥಾಯಿಸಮಿತಿ ಅಧ್ಯಕ್ಷ ಪ್ರಭಾಕರ್ ಮಂಡಿಸಿದರು.

ಎರಡನೇ ಹಂತದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಕಂಡುಬಂದಿದೆ. ಎಲ್ಲೆಡೆ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ನಿರ್ಲಕ್ಷಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕೊರೊನಾ ಕಾರ್ಯಪಡೆಗೆ ಸೂಚಿಸಲಾಗಿದೆ. ನಾಗರಿಕರು ಸ್ಥಳೀಯ ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಉಪಾಧ್ಯಕ್ಷೆ ಪೊನ್ನಿರಮೇಶ್, ಮುಖ್ಯಾಧಿಕಾರಿ ಶ್ರೀಧರ್ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.