ADVERTISEMENT

17ರಿಂದ ಸೇವಾ ಪಾಕ್ಷಿಕ ಅಭಿಯಾನ

ಪ್ರಧಾನಿ ಮೋದಿ ಜನ್ಮದಿನದಂದು ರಕ್ತದಾನ: ಡಾ.ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:42 IST
Last Updated 16 ಸೆಪ್ಟೆಂಬರ್ 2022, 4:42 IST

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ ಸೆ. 17ರಿಂದ ಅ. 2ರ ವರೆಗೆ ಸೇವಾ ಪಾಕ್ಷಿಕ ಅಭಿಯಾನದಡಿ ಪಕ್ಷದಿಂದ ರಕ್ತದಾನ ಸೇರಿದಂತೆ ವಿವಿಧ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ಕೆ.ಎನ್. ವೇಣುಗೋಪಾಲ್ ತಿಳಿಸಿದರು.

‘ಸೆ. 17ರಂದು ಮೋದಿ ಜನ್ಮದಿನ, ಸೆ. 25ರಂದು ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಹಾಗೂ ಅ. 2ರಂದು ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜನ್ಮದಿನ ಇದೆ. ಹೀಗಾಗಿ, ಈ ಅವಧಿಯಲ್ಲಿ 15 ದಿನ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಅಂಗವಿಕಲರಿಗೆ ಕೃತಕ ಕಾಲು ವಿತರಣೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ಆಸ್ಪತ್ರೆಯಲ್ಲಿರಕ್ತದಾನಿಗಳಪಟ್ಟಿ ಹಾಕಲಾಗುವುದು.ದೇಶವನ್ನು 2025ರೊಳಗೆ ಕ್ಷಯ ರೋಗದಿಂದ ಮುಕ್ತಗೊಳಿಸುವ ಸಲುವಾಗಿ ಕ್ಷಯ ರೋಗಿಗಳನ್ನು ದತ್ತು ಪಡೆದು, ಒಂದು ವರ್ಷ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ನೀಡುವ ಜವಾಬ್ದಾರಿ ವಹಿಸಿಕೊಳ್ಳಲಾಗುವುದು’ ಎಂದರು.

ADVERTISEMENT

‘ಕೋವಿಡ್ ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ನೀಡುವುದು, ಸಸಿ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ, ಅಮೃತ ಸರೋವರಗಳಲ್ಲಿ ಸ್ವಚ್ಛತಾ ಕಾರ್ಯ, ಆತ್ಮ ನಿರ್ಭರ ಭಾರತದ ಕಲ್ಪನೆಯನ್ನು ಜಿಲ್ಲೆಯಲ್ಲಿ ಜಾಗೃತಗೊಳಿಸುವುದು, ಮೋದಿ ಅವರ ಸಾಧನೆ ಕುರಿತಂತೆ ಫೋಟೊ, ಪುಸ್ತಕ ಪ್ರದರ್ಶನ ಆಯೋಜಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಮಾಲೂರು ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ, ಮುಖಂಡ ಹೂಡಿ ವಿಜಯ್‍ಕುಮಾರ್ ನಡುವೆ ನಡೆಯುತ್ತಿರುವ ಕಿತ್ತಾಟ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ವಿಚಾರವಾಗಿ ಯಾವುದೇ ಗೊಂದಲ ಇಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಪಕ್ಷದೊಳಗೆ ಬಗೆಹರಿಸಲಾಗುವುದು. ಇಬ್ಬರೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸೂಕ್ತ ಅಭ್ಯರ್ಥಿಯನ್ನು ಪಕ್ಷ ಸೂಚಿಸಲಿದೆ’ ಎಂದರು.

ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ‘ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನಾ ಸಮಾವೇಶ ಯಶಸ್ವಿಯಾದ ಹಿನ್ನೆಲೆಯಲ್ಲಿ ಸೆ. 18ರಂದು ಕೋಲಾರದಲ್ಲಿ ಕೃತಜ್ಞತಾ ಸಭೆ ಹಮ್ಮಿಕೊಳ್ಳಲಾಗಿದೆ. ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಡಾ.ಕೆ. ಸುಧಾಕರ್‌ ಭಾಗವಹಿಸಲಿದ್ದಾರೆ’ ಎಂದರು.

ಕೆಯುಡಿಎ ಅಧ್ಯಕ್ಷ ವಿಜಯ್‌ ಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ. ಮುನಿವೆಂಕಟಪ್ಪ, ತಾಲ್ಲೂಕು ಅಧ್ಯಕ್ಷ ಸಿ.ಡಿ. ರಾಮಚಂದ್ರೇಗೌಡ, ತಿಮ್ಮರಾಯಪ್ಪ, ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.