ADVERTISEMENT

ಕೋವಿಡ್‌: ಮಕ್ಕಳ ಕಲಿಕೆಗೆ ಹಿನ್ನಡೆ- ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 16:07 IST
Last Updated 25 ಅಕ್ಟೋಬರ್ 2021, 16:07 IST
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಕೋಲಾರದ ಅವೇಲಿ ಮೊಹಲ್ಲಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ಬ್ಯಾಗ್‌ ಮತ್ತು ಸಮವಸ್ತ್ರ ವಿತರಿಸಿದರು
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಕೋಲಾರದ ಅವೇಲಿ ಮೊಹಲ್ಲಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ಬ್ಯಾಗ್‌ ಮತ್ತು ಸಮವಸ್ತ್ರ ವಿತರಿಸಿದರು   

ಕೋಲಾರ: ‘ಕೋವಿಡ್ ಹೆಮ್ಮಾರಿಯಿಂದಾಗಿ ಕಳೆದ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಶಾಲೆಗಳು ಇದೀಗ ತೆರೆದಿವೆ. ಎಲ್ಲೆಲ್ಲೂ ಮಕ್ಕಳ ಕಲರವ ಕಂಡು ಬರುತ್ತಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಚ್ಚರಿಕೆ ವಹಿಸಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ನಗರದ ಅವೇಲಿ ಮೊಹಲ್ಲಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ಶಿಕ್ಷಕರ ಗೆಳೆಯರ ಬಳಗದ ವತಿಯಿಂದ ಬ್ಯಾಗ್, ಶೂ, ಸಮವಸ್ತ್ರ, ನೋಟ್‌ ಪುಸ್ತಕ ವಿತರಿಸಿ ಮಾತನಾಡಿ, ‘ಕೋವಿಡ್‌ನಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ. ಇದನ್ನು ಸರಿಪಡಿಸುವ ಹೊಣೆ ಶಿಕ್ಷಕರ ಮೇಲಿದೆ. ಕಲಿಕೆಯಲ್ಲಿ ಪ್ರಗತಿಯ ಜತೆಗೆ ಶಾಲೆಗೆ ಗೈರಾಗುವ ಮಕ್ಕಳ ಪೋಷಕರ ಮನವೊಲಿಸಿ ಶಾಲೆಗೆ ಕರೆತರುವ ಕೆಲಸ ಆಗಬೇಕು’ ಎಂದರು.

‘ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮಕ್ಕಳು ತರಗತಿಯಲ್ಲಿ ಅಂತರ ಕಾಯ್ದುಕೊಳ್ಳಬೇಕು. ಈ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು. ಶಾಲೆಯ ಆವರಣ ಸುಂದರಗೊಳಿಸಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಿ. ಮತ್ತಷ್ಟು ಮಕ್ಕಳು ಸರ್ಕಾರಿ ಶಾಲೆಗಳತ್ತ ಬರುವಂತೆ ಮಾಡಿ’ ಎಂದು ಸೂಚಿಸಿದರು.

ADVERTISEMENT

‘ಶಿಕ್ಷಕರಾಗಿರುವುದು ನಮ್ಮ ಅದೃಷ್ಟ. ಮಕ್ಕಳಿಗೆ ಅಗತ್ಯವಾದ ಎಲ್ಲಾ ಶೈಕ್ಷಣಿಕ ಆದ್ಯತೆ ಪೂರೈಸುತ್ತಿದ್ದೇವೆ. ಪೋಷಕರು ತಪ್ಪದೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಸಹಕಾರ ನೀಡಬೇಕು’ ಎಂದು ಶಿಕ್ಷಕ ಗೆಳೆಯರ ಬಳಗದ ಸದಸ್ಯ ಕಾರ್ಯದರ್ಶಿ ವೀರಣ್ಣಗೌಡ ಕೋರಿದರು.

ಶಾಲೆಯ ಮುಖ್ಯ ಶಿಕ್ಷಕಿ ಶಾಹಿಯಾ ಮುನಾವರಿ, ಎಸ್‌ಡಿಎಂಸಿ ಅಧ್ಯಕ್ಷ ಜಬೇರಖಾನಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.