ADVERTISEMENT

ಸೇವಾ ಸಿಂಧು ಪೋರ್ಟಲ್‌ ಆರಂಭ

​ಪ್ರಜಾವಾಣಿ ವಾರ್ತೆ
Published 8 ಮೇ 2019, 9:13 IST
Last Updated 8 ಮೇ 2019, 9:13 IST

ಕೋಲಾರ: ರಾಜ್ಯ ಸರ್ಕಾರವು ವಿವಿಧ ಇಲಾಖೆ ಮೂಲಕ ಒದಗಿಸುತ್ತಿರುವ 346 ನಾಗರೀಕ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಅಂರ್ತಜಾಲದಲ್ಲಿ ‘ಸೇವಾ ಸಿಂಧು’ ಅಥವಾ ‘ಇ–ಜಿಲ್ಲೆ’ ಎಂಬ ಪೋರ್ಟಲ್ ಆರಂಭಿಸಿದೆ.

ಈ ಪೋರ್ಟಲ್‌ ರಾಷ್ಟ್ರೀಯ ಇ-ಆಡಳಿತ ಯೋಜನೆಯ 31 ಮಿಷನ್ ಯೋಜನೆಯ  ಭಾಗವಾಗಿದೆ. ಪ್ರಸ್ತುತ 25 ಇಲಾಖೆಗಳ ಒಟ್ಟು 125 ಸೇವೆಗಳನ್ನು ನೀಡಲಾಗುತ್ತಿದ್ದು, ಮುಂದೆ ವಿವಿಧ ಇಲಾಖೆಗಳ ಹೆಚ್ಚಿನ ಸೇವೆಗಳನ್ನು ಸೇರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪುಷ್ಪಲತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಜಿಟಲ್ ಇಂಡಿಯಾ ಅಡಿ ನೋಂದಣಿಯಾಗಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 200 ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನಾಗರೀಕರ ಮನೆ ಬಾಗಿಲಿಗೆ ಸೇವೆ ಒದಗಿಸಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಪ್ರಸ್ತುತ ಸೇವಾ ಸಿಂಧು ಯೋಜನೆಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಡ್‌ಗಳನ್ನು ಜಿಲ್ಲೆಯ 40ಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಎಲ್ಇಗಳಿಗೆ ತಮ್ಮ ಕೇಂದ್ರದಲ್ಲೇ ಆರೋಗ್ಯ ಚೀಟಿ ವಿತರಿಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಸರ್ಕಾರದಿಂದ ಈ ಸೇವೆಗೆ ಶುಲ್ಕ ನಿಗದಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.

ಈ ಸೇವೆಗೆ ನಿಗದಿತ ಹೆಚ್ಚು ಹಣ ಕೇಳಿದರು ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 080 44554455ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು ಅಥವಾ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.