ADVERTISEMENT

ಪೇಜಾವರ ಶ್ರೀ ಅಗಲಿಕೆಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 15:05 IST
Last Updated 29 ಡಿಸೆಂಬರ್ 2019, 15:05 IST
ಕೋಲಾರದ ಗಾಂಧಿವನದಲ್ಲಿ ಪೇಜಾವರ ಶ್ರೀಗಳ ಅಗಲಿಕೆಗೆ ವಿವಿಧ ಸಂಘಟನೆಗಳು ಮುಖಂಡರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೋಲಾರದ ಗಾಂಧಿವನದಲ್ಲಿ ಪೇಜಾವರ ಶ್ರೀಗಳ ಅಗಲಿಕೆಗೆ ವಿವಿಧ ಸಂಘಟನೆಗಳು ಮುಖಂಡರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.   

ಕೋಲಾರ: ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಗಲಿಕೆಗೆ ನಗರದಲ್ಲಿ ಭಾನುವಾರ ವಿವಿಧ ಸಂಘಟನೆ ಪ್ರಮುಖರು ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ಗಾಂಧಿವನ, ಜಯನಗರ, ಕೀಲುಕೋಟೆ ಬಡಾವಣೆಗಳಲ್ಲಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ವಿವಿಧ ಸಂಘಟನೆಗಳ ಮುಖಂಡರು ಪುಸ್ಪನಮನ ಸಲ್ಲಿಸಿ, ಅವರ ಸೇನೆಯನ್ನು ಸ್ಮರಿಸಿದರು.

ಆರ್‌ಎಸ್‌ಎಸ್ ಜಿಲ್ಲಾವಾಹಕ ಡಾ.ಶಂಕರ್ ನಾಯಕ್ ಮಾತನಾಡಿ, ‘ಶ್ರೀಗಳ ನಿಧನದಿಂದ ಶ್ರೇಷ್ಟ ಮಾರ್ಗದರ್ಶಕರನ್ನು ದೇಶ ಕಳೆದುಕೊಂಡಂತಾಗಿದೆ. ಹಿಂದೂ ಧರ್ಮಕ್ಕೆ ಅಪಾರ ಕೊಡುಗೆ ನೀಡಿದ್ದ ಪೇಜಾವರ ಶ್ರೀಗಳು ಹಿಂದೂ ಸಮಾಜದಲ್ಲಿನ ಅಸ್ಪೃಶ್ಯತೆ ವಿರುದ್ದ ನಡೆಸಿದ ಹೋರಾಟ ರೂಪಿಸಿದ್ದರು’ ಎಂದು ಸ್ಮರಿಸಿದರು.

ADVERTISEMENT

ನಗರಸಭೆ ಆಯುಕ್ತ ಶ್ರೀಕಾಂತ್ ಮಾತನಾಡಿ, ‘ಶ್ರೀಗಳು ತಮ್ಮ ನಿವಾಸಕ್ಕೆ ಬಂದು ಆಶೀರ್ವದಿಸಿದ್ದರು. ಈ ನೆನಪು ಈಗಲು ಇದೆ. ಅವರ ಅಗಲಿಕೆಯಿಂದ ಹಿಂದೂ ಧರ್ಮಕ್ಕೆ ದಾರಿ ತೋರುವವರು ಯಾರು ಎಂಬ ಆತಂಕ ಸೃಷ್ಟಿಯಾಗಿದೆ. ಆದರೆ ಅವರ ದೇಹ ಕಣ್ಮರೆಯಾಗಿದ್ದರೂ ಅವರ ಮಾರ್ಗದರ್ಶನ, ಆದರ್ಶಗಳು ನಮ್ಮೊಂದಿಗೆ ಸದಾ ಜೀವಂತವಾಗಿದ್ದು ಮುನ್ನಡೆಸುತ್ತಿವೆ’ ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ.ಚನ್ನಪ್ಪ ಮಾತನಾಡಿ, ‘ಪೇಜಾವರರ ಸಾಮಾಜಿಕ ಕಾಳಜಿ ಹಿಂದೂ ಸಮಾಜದ ಭದ್ರತೆಗಾಗಿ ಕೈಗೊಂಡ ಕಾರ್ಯ ಸ್ಮರಣೀಯ. ರಾಮಮಂದಿರ ನಿರ್ಮಾಣದ ಅವರ ಕನಸು ಈಡೇರುವ ಹಂತದಲ್ಲಿ ಅವರು ಇಲ್ಲವಾಗಿದ್ದು ದುಃಖಕರ’ ಎಂದರು.

ಅಂಜುಮಾನ್ ಇಸ್ಲಾಮೀಯ ಕಾರ್ಯದರ್ಶಿ ಸೈಪುಲ್ಲಾ ಮಾತನಾಡಿ, ‘ಅಸಮಾನತೆ ಹೋಗಲಾಡಿಲು ಮಡಿವಂತಿಕೆ ಬಿಟ್ಟು ಹೋರಾಡಿದ ಜಾತ್ಯಾತೀತ ಶಕ್ತಿಯಾಗಿದ್ದವರು ಸ್ವಾಮೀಜಿಗಳು. ಪಾದ್ರಿ ಪಾದರ್ ನಾಣಯ್ಯ, ಇಂತಹ ಮಹಾನ್ ವ್ಯಕ್ತಿ ಸಮಾಜದಲ್ಲಿ ಮತ್ತೊಮ್ಮೆ ಹುಟ್ಟಿಬರಲಿ’ ಎಂದು ಶ್ರದ್ದಾಂಜಲಿ ಅರ್ಪಿಸಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಕನ್ನಡ ಉಪನ್ಯಾಸಕರ ವೇದಿಕೆ ಜಿಲ್ಲಾ ಘಟಕದ ಜೆ.ಜಿ.ನಾಗರಾಜ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಶ್ರೀನಿವಾಸ್, ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ, ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಜೋಷಿ, ಮನ್ವಂತರ ಪ್ರಕಾಶನ ಅಧ್ಯಕ್ಷ ಅನಂತರಾಮ್, ಬೆಮೆಲ್ ನಿವೃತ್ತ ಅಧಿಕಾರಿ ಜಯಸಿಂಹ, ವಂದೇ ಮಾತರಂ ಸೋಮಶಂಕರ್, ಬಜರಂಗದಳ ಬಾಲಾಜಿ,ನವೀನ್ ಬ್ರಹ್ಮಾವರ, ನಿತ್ಯಾನಂದ ಶೆಟ್ಟಿ, ಹರೀಶ್‌ಹೊಳ್ಳ, ಹರ್ಷರಾಜ್, ವಿಶ್ವನಾಥ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.