ADVERTISEMENT

ಶ್ರೀರಾಮಾಯಣ ದರ್ಶನಂ ಸಂದೇಶ ಅಭಿಯಾನ

23ರಂದು ಚಾಲನೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:48 IST
Last Updated 22 ಏಪ್ರಿಲ್ 2019, 13:48 IST

ಕೋಲಾರ: ‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಪರಿಷತ್ತಿನ ಸಹಯೋಗದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಏ.23ರಿಂದ ಮೇ 14ರವರೆಗೆ ಶ್ರೀರಾಮಾಯಣ ದರ್ಶನಂ ದಾರ್ಶನಿಕ ಸಂದೇಶ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ತಿಳಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಏ.23ರಂದು ಮಂಗಸಂದ್ರದ ಬೆಂಗಳೂರು ವಿ.ವಿ ಸ್ನಾತಕೋತ್ತರ ಕೇಂದ್ರದಲ್ಲಿ ಬೆಳಿಗ್ಗೆ ಬೆಂಗಳೂರು ಉತ್ತರ ವಿ.ವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಅಭಿಯಾನ ಉದ್ಘಾಟಿಸುತ್ತಾರೆ’ ಎಂದರು.

‘ಸಾಹಿತಿ ಚಂದ್ರಶೇಖರ ನಂಗಲಿ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ತಮಿಳುನಾಡಿನ ಮದ್ರಾಸ್ ವಿ.ವಿಯ ಕನ್ನಡ ಪ್ರಾಧ್ಯಾಪಕ ತಮಿಳ್ ಸೆಲ್ವಿ ಹಾಗೂ ಮೈಸೂರಿನ ಭಾರತೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕ ಆರ್.ಚಲಪತಿ ಅವರು ರಾಮಾಯಣ ದರ್ಶನಂ ವಿಮರ್ಶೆಗಳ ವಿಮರ್ಶೆ ಕುರಿತು ವಿಷಯ ಮಂಡಿಸುತ್ತಾರೆ. ಕುವೆಂಪು ಹಾಗೂ ಸಮಗ್ರ ಸಾಹಿತ್ಯ ಕುರಿತು ರಸಪ್ರಶ್ನೆ ಸ್ಪರ್ಧೆ ನಡೆಯುತ್ತದೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ, ವಿಶೇಷ ಉಪನ್ಯಾಸ, ಕುವೆಂಪುರ ಸಮಗ್ರ ಸಾಹಿತ್ಯದ ಬಗೆಗಿನ ಅರಿವು ಮತ್ತು ಜ್ಞಾನ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತದೆ. ವಿಜೇತರಿಗೆ ಕುವೆಂಪುರ ಸಮಗ್ರ ಸಾಹಿತ್ಯದ ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವುದು’ ಎಂದು ವಿವರಿಸಿದರು.

‘ಜಯನಾಟ್ಯ ಕಲಾ ಅಕಾಡೆಮಿ ಕಲಾವಿದರು ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂನ ಪಂಚವಟಿ ಭಾಗದಿಂದ ಹಿಡಿದು ರಾವಣ ಸಂಹಾರದವರೆಗಿನ ಘಟನೆಗಳ ನೃತ್ಯರೂಪಕ ಪ್ರದರ್ಶಿಸುತ್ತಾರೆ. ಈ ಕಲಾವಿದರು ಒಂದು ತಿಂಗಳಿನಿಂದ ಅಭ್ಯಾಸನಿರತರಾಗಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯುವ ಈ ಕಾರ್ಯಕ್ರಮದ ಕಡೆಯ ಭಾಗವಾಗಿ ನೃತ್ಯರೂಪಕವಿರುತ್ತದೆ’ ಎಂದು ಮಾಹಿತಿ ನೀಡಿದರು.

ಅಭಿಯಾನ ಎಲ್ಲೆಲ್ಲೆ?: ‘ಏ.26ರಂದು ಬಂಗಾರಪೇಟೆಯ ಕೆ.ಸಿ.ರೆಡ್ಡಿ ಸರ್ಕಾರಿ ಪದವಿ ಕಾಲೇಜು, ಮೇ 3ರಂದು ಕೆಜಿಎಫ್‌ನ ಜೈನ್ ಪದವಿ ಕಾಲೇಜು, ಮೇ 6ರಂದು ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೇ 10ರಂದು ಮುಳಬಾಗಿಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭಿಯಾನ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಶಿಕ್ಷಕರು, ಸಾಹಿತ್ಯಾಸಕ್ತರು ಭಾಗವಹಿಸಬೇಕು’ ಎಂದು ಕೋರಿದರು.

‘ಶ್ರೀನಿವಾಸಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ ವಿಚಾರಗೋಷ್ಠಿ ಹಾಗೂ ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಭಾಗವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ಕೈ ಜೋಡಿಸಿದೆ: ‘ಬೆಂಗಳೂರು ಉತ್ತರ ವಿ.ವಿಯು 2017ರ ಸೆ.20ರಿಂದ ಕೋಲಾರದಲ್ಲಿ ಆರಂಭಗೊಂಡಿದೆ. ಈ ನೆಲದ ಗುರು ಮತ್ತು ನುಡಿಯ ಗುರುತು ಇಲ್ಲದಿದ್ದರೆ ವಿ.ವಿ ಸ್ಥಾಪಿಸಿಯೂ ಜಿಲ್ಲೆಗೆ ಯಾವುದೇ ಕೊಡುಗೆ ಸಿಕ್ಕಿದಂತೆ ಆಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಜಿಲ್ಲೆಯ ಸಾಮರ್ಥ್ಯ, ವೈಚಾರಿಕ ನೆಲೆ ಮನವರಿಕೆ ಮಾಡಿಕೊಡುವ ಉದ್ದೇಶಕ್ಕೆ ಸ್ನಾತಕೋತ್ತರ ಕೇಂದ್ರ ಕೈ ಜೋಡಿಸಿದೆ’ ಎಂದು ಬೆಂಗಳೂರು ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡೊಮಿನಿಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.