ADVERTISEMENT

ಅಕ್ಷರ ಕ್ರಾಂತಿ ಸೃಷ್ಟಿಸಿದ ಸಿದ್ಧಗಂಗಾಶ್ರೀ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 16:34 IST
Last Updated 21 ಜನವರಿ 2020, 16:34 IST
ವಿವಿಧ ಸಂಘಟನೆಗಳ ಸದಸ್ಯರು ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಕೋಲಾರದಲ್ಲಿ ಮಂಗಳವಾರ ದಾಸೋಹ ದಿನಾಚರಣೆ ಆಚರಿಸಿದರು.
ವಿವಿಧ ಸಂಘಟನೆಗಳ ಸದಸ್ಯರು ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಕೋಲಾರದಲ್ಲಿ ಮಂಗಳವಾರ ದಾಸೋಹ ದಿನಾಚರಣೆ ಆಚರಿಸಿದರು.   

ಕೋಲಾರ: ‘ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯು ಹಸಿದು ಬಂದ ಅತಿಥಿಗಳಿಗೆ ದಾಸೋಹ ಸೇವೆ ಸಲ್ಲಿಸಿ ಸ್ವಸ್ಥ ಸಮಾಜಕ್ಕೆ ಬುನಾದಿ ಹಾಕಿದರು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಸ್ಮರಿಸಿದರು.

ಶಿವಕುಮಾರ ಸ್ವಾಮೀಜಿಯ ಭಕ್ತ ವೃಂದವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾಸೋಹ ದಿನಾಚರಣೆಯಲ್ಲಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿಯು ಇಡೀ ಜೀವತಾವಧಿಯನ್ನು ಸಮಾಜಕ್ಕೆ ಮೀಸಲಿಟ್ಟರು. ಶ್ರೀಗಳು ಜಾತಿ, ಧರ್ಮ ಬೇಧ ಮರೆತು ಸಮಾಜದ ಎಲ್ಲರಿಗೂ ವಿದ್ಯೆ ನೀಡಿದರು’ ಎಂದರು.

‘ಆರೋಗ್ಯ, ಶಿಕ್ಷಣ, ಅನ್ನ ದಾಸೋಹ ಸೇವೆ ನೀಡಿದ ಶಿವಕುಮಾರ ಸ್ವಾಮೀಜಿಯನ್ನು ಎಲ್ಲರೂ ಸ್ಮರಿಸಬೇಕು. ಅವರು ಕಾಯಕವೇ ಕೈಲಾಸ ಎಂದು ರೂಪಿಸಿದ ಮಹಾನ್ ವ್ಯಕ್ತಿ. ನಡೆದಾಡುವ ದೇವರು, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ ಎಂದೇ ಹೆಸರಾಗಿದ್ದ ಅವರು 111 ವರ್ಷಗಳ ತುಂಬು ಜೀವನ ನಡೆಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಆರೋಗ್ಯ ಮತ್ತು ವಸತಿ ಸೌಕರ್ಯ ಕಲ್ಪಿಸಿದರು’ ಎಂದು ಹೇಳಿದರು.

ADVERTISEMENT

‘ಸ್ವಾಮೀಜಿಯು ಶಿಕ್ಷಣದ ಮಹತ್ವ ತಿಳಿದು ರಾಜ್ಯದಲ್ಲಿ ಅಕ್ಷರ ಕ್ರಾಂತಿ ಮಾಡಿದರು. ಸರಳ ಸಜ್ಜನಿಕೆಯ ಅವರು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಜಾತ್ಯಾತೀತ ತತ್ವ ಮೈಗೂಡಿಸಿಕೊಂಡಿದ್ದ ಶ್ರೀಗಳು ನಿಜಕ್ಕೂ ಪವಾಡ ಪುರುಷರು. ಬಸವಣ್ಣರ ತತ್ವಾದರ್ಶ ಕಾರ್ಯರೂಪಕ್ಕೆ ತಂದ ಅಪರೂಪದ ತಪಸ್ವಿ’ ಎಂದು ಬಣ್ಣಿಸಿದರು.

‘ಬಸವಣ್ಣರ ಕಾಯಕವೇ ಕೈಲಾಸ ತತ್ವದಲ್ಲಿ ನಂಬಿಕೆಯಿಟ್ಟಿದ್ದ ಶ್ರೀಗಳು ತ್ರಿವಿಧ ದಾಸೋಹದಲ್ಲಿ ಧರ್ಮ, ಜಾತಿ, ಮತದ ಬೇಧವಿಲ್ಲದೆ ಮಕ್ಕಳಿಗೆ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಲಕ್ಷಾಂತರ ಮಂದಿಯ ಹಸಿವು ನೀಗಿಸಿ ಸಮಾಜದ ಉಳಿವಿಗೆ ಜ್ಞಾನ ಗಂಗೆ ಹರಿಸಿದರು. ಅವರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿ’ ಎಂದು ಅಭಿಪ್ರಾಯಪಟ್ಟರು.

ಆದರ್ಶಮಯ ಜೀವನ: ‘ದಯವೇ ಧರ್ಮದ ಮೂಲವಯ್ಯ ಎಂಬಂತೆ ಶಿವಕುಮಾರ ಸ್ವಾಮೀಜಿಯು ಸರ್ವಸ್ವವನ್ನು ಜಗತ್ತಿನ ಕಲ್ಯಾಣಕ್ಕೆ ಸಮರ್ಪಿಸಿದರು. ಅಧ್ಯಾತ್ಮ ಜೀವಿಯಾಗಿ, ಪರಂಪರೆಯ ಮಹಾನ್ ಪಾಲಕರಾಗಿ, ಕೋಟ್ಯಂತರ ಜೀವಿಗಳ ಜೀವನಾಡಿಯಾಗಿ ಆದರ್ಶಮಯ ಜೀವನ ನಡೆಸಿದರು’ ಎಂದು ರಾಜ್ಯ ಸರಕು ಮಾರಾಟ ಮತ್ತು ಖರೀದಿದಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು ಹೇಳಿದರು.

‘ಶ್ರೀಗಳು ದೈಹಿಕವಾಗಿ ದೂರವಾಗಿದ್ದರೂ ಮಾನಸಿಕವಾಗಿ ಜನರಿಂದ ದೂರವಾಗಲು ಎಂದಿಗೂ ಸಾಧ್ಯವಿಲ್ಲ. ಗಗನಕ್ಕೆ ಗಗನವೇ ಸಾಟಿ, ಸಾಗರಕ್ಕೆ ಸಾಗರವೇ ಉಪಮೆ ಎಂಬಂತೆ ಸೇವಾ ಕ್ಷೇತ್ರಕ್ಕೆ ಶಿವಕುಮಾರ ಸ್ವಾಮೀಜಿಯೊಬ್ಬರೇ ಸಾಟಿ’ ಎಂದರು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಸಚ್ಚಿದಾನಂದ, ನಂದೀಶ್‌ಕುಮಾರ್, ಕೆ.ಬಿ.ಬೈಲಪ್ಪ, ಪರಮೇಶ್ವರನ್, ನಾರಾಯಣಪ್ಪ, ಸುಬ್ಬರಾಯಪ್ಪ, ಕೆ.ನಾರಾಯಣಗೌಡ, ಪ್ರಸಾದ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ್ ಚಿಲಕಾಂತ್‌ಮಠ್, ನಗರಸಭೆ ಮಾಜಿ ಸದಸ್ಯ ಅಫ್ರೋಜ್‌ ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.