ADVERTISEMENT

5 ವರ್ಷವೂ ತಾವೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ ಮೇಲೆ ಮುಗಿಯಿತಲ್ಲವೇ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:46 IST
Last Updated 9 ಅಕ್ಟೋಬರ್ 2025, 2:46 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಕೋಲಾರ: ‘ಐದು ವರ್ಷ ತಾವೇ ಮುಖ್ಯಮಂತ್ರಿ ಆಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹೇಳಿದ ಮೇಲೆ ಮುಗಿಯಿತಲ್ಲವೇ? ಮುಖ್ಯಮಂತ್ರಿಯೇ ಹೇಳಿದ ಮೇಲೆ ನಾನು ಏನೂ ಹೇಳುವ ಅವಶ್ಯವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಐದು ವರ್ಷವೂ ತಾವೇ ಮುಖ್ಯಮಂತ್ರಿ ಆಗಿರುವುದಾಗಿ ಸಿದ್ದರಾಮಯ್ಯ ಅವರ ಇತ್ತೀಚಿಗಿನ ಹೇಳಿಕೆ ಕುರಿತು ಕೆಜಿಎಫ್‌ ತಾಲ್ಲೂಕಿನ ನಲ್ಲೂರಿನಲ್ಲಿ ಬುಧವಾರ ಸುದ್ದಿಗಾರರು ಪ್ರಸ್ತಾಪಿಸಿದ್ದಕ್ಕೆ ಅವರು ಈ ರೀತಿ ಉತ್ತರಿಸಿದರು.

ಡಿ.ಕೆ.ಶಿವಕುಮಾರ್‌ ಕೂಡ ‌ಮುಖ್ಯಮಂತ್ರಿ ರೇಸ್‌ನಲ್ಲಿರುವ ಕುರಿತ ಪ್ರಶ್ನೆಗೆ, ‘ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ. ಸಚಿವರ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಇವೆಲ್ಲಾ ನನ್ನ ವ್ಯಾಪ್ತಿಗೆ ಬಾರದ ವಿಚಾರಗಳು’ ಎಂದರು.

ADVERTISEMENT

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ಕುರಿತ ಚರ್ಚೆಗೆ, ‘ಈ ವಿಚಾರದಲ್ಲಿ ಸೃಷ್ಟಿಯಾಗಿದ್ದ ಗೊಂದಲ ಬಗೆಹರಿದಿದೆ. ಚರ್ಚೆ ಕೂಡ ನಡೆದಿದ್ದು, ಮುಖ್ಯಮಂತ್ರಿ ಕೂಡ ಸ್ಪಷ್ಟಪಡಿಸಿದ್ದಾರೆ. ಇದು ಕೇಂದ್ರ ಸರ್ಕಾರ ಮಾಡುವಂಥ ಕೆಲಸ’ ಎಂದು ಹೇಳಿದರು

‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆತದ ಪ್ರಕರಣ ನಡೆಯಬಾರದಿತ್ತು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಠಿಣ ಶಬ್ದಗಳಲ್ಲಿ ಘಟನೆಯನ್ನು ಖಂಡಿಸಿದ್ದಾರೆ. ಘಟನೆ ಸಂಬಂಧ ಯಾವುದೇ ಕ್ರಮ ಬೇಡ ಎಂದು ಗವಾಯಿ ಅವರೇ ದೊಡ್ಡ ಮನಸ್ಸು ಮಾಡಿ ಬಿಟ್ಟಿದ್ದಾರೆ. ಶೂ ಎಸೆದವರೇ ಪಶ್ಚಾತ್ತಾಪಡಲಿ ಎಂಬುದಾಗಿಯೂ ಹೇಳಿದ್ದಾರೆ’ ಎಂದರು.

‘ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಪ್ರತ್ಯೇಕ ಪ್ಯಾಕೇಜ್‌ ಮಾಡಿ ಗುತ್ತಿಗೆ ಕೊಡಲಾಗುತ್ತಿದೆ. ಏನಾದರೂ ಸಮಸ್ಯೆ ಇದ್ದು, ನನ್ನ ಗಮನಕ್ಕೆ ತಂದರೆ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು. ‌

ವರ್ಷದ ಹಿಂದೆ ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ನನ್ನನ್ನು ಭೇಟಿಯಾಗಿ ಕೆಜಿಎಫ್ ತಾಲ್ಲೂಕಿನ‌ ನಲ್ಲೂರು ಗ್ರಾಮದ ಬಳಿ ಪಾಲರ್‌ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಬಗ್ಗೆ ಚರ್ಚಿಸಿ ಅನುದಾನ ಕೋರಿದ್ದರು. ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ₹10 ಕೋಟಿ ಅನುದಾನ ನೀಡಿದ್ದು, ಈಗ ಆ ಕೆಲಸ ಉತ್ತಮವಾಗಿ ಮುಗಿದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.