ADVERTISEMENT

2028ರವರೆಗೂ ಸಿದ್ದರಾಮಯ್ಯ ಸಿ.ಎಂ: ಸಚಿವ ಜಮೀರ್‌ ಅಹ್ಮದ್‌ ಖಾನ್‌

ಡಿಕೆಶಿ ಸಿ.ಎಂ ಆಗಲೇಬೇಕು; ಈಗಲ್ಲ 2028ಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:34 IST
Last Updated 10 ಜನವರಿ 2026, 6:34 IST
ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಶುಕ್ರವಾರ ನೂರಾನಿ ಮಸೀದಿ ಉದ್ಘಾಟನೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಭಾಗವಹಿಸಿದ್ದರು
ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಶುಕ್ರವಾರ ನೂರಾನಿ ಮಸೀದಿ ಉದ್ಘಾಟನೆ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಭಾಗವಹಿಸಿದ್ದರು   

ಶ್ರೀನಿವಾಸಪುರ: ಸಿದ್ದರಾಮಯ್ಯ ಅವರು 2028ರವರೆಗೂ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯ ಜೊತೆ ಹೈಕಮಾಂಡ್‌ ಇದ್ದು, ಬೇರೆ ಯಾರಿಗೂ ಬದಲಾವಣೆ ಮಾಡಲು ಆಗಲ್ಲ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ತಿಳಿಸಿದರು.

ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಶುಕ್ರವಾರ ನೂರಾನಿ ಮಸೀದಿ ಉದ್ಘಾಟಿಸಿ ಮಾತನಾಡಿದ ಅವರು, ‘ಕೆಲವರು ನವೆಂಬರ್‌ ಕ್ರಾಂತಿ ಎಂದಿದ್ದರು. ನವೆಂಬರ್‌, ಡಿಸೆಂಬರ್‌ ಮುಗಿದಿದ್ದು ಈಗ ಏನಾಗಿದೆ? ಯಾವುದೇ ಕ್ರಾಂತಿ, ಭ್ರಾಂತಿ ಆಗಲ್ಲ; ಬದಲಾಗಿ ಆ ರೀತಿ ಹೇಳಿದವರಿಗೆ ವಾಂತಿ, ಭೇದಿ ಆಗುತ್ತದೆ ಎಂಬುದಾಗಿ ನಾನು ಹಿಂದೆ ಹೇಳಿದ್ದೆ. ಈಗ ಸಂಕ್ರಾಂತಿ ಎಂದು ಹೇಳುತ್ತಿದ್ದು, ಅದು ಕೂಡ ಸುಳ್ಳಾಗುತ್ತದೆ’ ಎಂದರು.

ಹೈಕಮಾಂಡ್‌ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರಬೇಕಾಗುತ್ತದೆ. ಬದಲಾವಣೆ ಮಾಡಲು ಅವರಿಗೆ ಮಾತ್ರ ಸಾಧ್ಯ. ಹೈಕಮಾಂಡ್‌ ತೀರ್ಮಾನದಂತೆಯೇ ಎಲ್ಲವೂ ನಡೆಯುತ್ತದೆ ಎಂದು ಹೇಳಿದರು.

ADVERTISEMENT

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ನಾನು ಕೂಡ ಬಯಸುತ್ತೇನೆ. ಆದರೆ, ಈಗಲ್ಲ; 2028ಕ್ಕೆ. ಸಿದ್ದರಾಮಯ್ಯ ಬಳಿಕ ಅವರೇ ಮುಖ್ಯಮಂತ್ರಿ ಆಗಬೇಕು ಎಂದರು.

ಹಿಂದಿನ ಕಾಂಗ್ರೆಸ್ಸೇತರ ಸರ್ಕಾರಗಳು ಹಾಗೂ ಪ್ರಸ್ತುತ ಕೇಂದ್ರ ಸರ್ಕಾರಕ್ಕಿಂತಲೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗಗಳಿಗೂ ಹೆಚ್ಚಿನ ಒತ್ತು ನೀಡಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ಕೊಂಡಾಡಿದರು.

ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ‘ಜೀವನ ಶಾಶ್ವತವಲ್ಲ; ನಾವು ಮಾಡುವ ಒಳ್ಳೆಯ ಕೆಲಸಗಳೇ ಶಾಶ್ವತ. ಗ್ರಂಥಾಲಯಗಳಲ್ಲಿ ಎಲ್ಲಾ ಧರ್ಮಗಳ ಗ್ರಂಥಗಳನ್ನು ಇಡಬೇಕು, ಎಲ್ಲರಿಗೂ ಪುಸ್ತಕ ಓದುವ ಅವಕಾಶ ಕಲ್ಪಿಸಬೇಕು. ಇದು ದೇವಾಲಯದಂತೆಯೇ, ಇಲ್ಲಿ ಎಲ್ಲರೂ ಆಹ್ವಾನಿತರಾಗಿರಬೇಕು’ ಎಂದರು.

ಮಸೀದಿ ಹಾಗೂ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅವರು, ‘ವಸತಿ ಸಚಿವರು ಹಾಗೂ ಮುಖ್ಯಮಂತ್ರಿ ನಡುವಿನ ಒಡನಾಟ ಉತ್ತಮವಾಗಿದ್ದು, ಸಚಿವರು ತಮ್ಮ ಕೈಯಲ್ಲಿ ಆದಷ್ಟು ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ, ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಮೌಲಾನಾ ಶಫಿ ಸಾದಿ, ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಅಕ್ಬರ್ ಶರೀಫ್, ಮಾಜಿ ಪುರಸಭೆ ಅಧ್ಯಕ್ಷ ಟಿ.ಎಂ.ಬಿ.ಮುಖ್ತಾರ್ ಅಹ್ಮದ್, ಜಿಲ್ಲಾ ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ ನಿಸಾರ್ ಅಹ್ಮದ್ ಖಾನ್, ಲಕ್ಷ್ಮಿಪುರ ಗ್ರಾಮದ ಮಸೀದಿ ಅಧ್ಯಕ್ಷ ಅಬ್ದುಲ್ ರಿಯಾಜ್ ಖಾನ್, ಕಾರ್ಯದರ್ಶಿ ಅಪ್ಸರ್ ಪಾಷ, ಸದಸ್ಯರಾದ ಸೈಯದ್ ಜಮೀಲ್ ಪಾಷ, ಸಮೀವುಲ್ಲಾ, ಷೇಕ್ ಇಸ್ಮಾಯಿಲ್, ಮುಖಂಡರಾದ ಗೌನಿಪಲ್ಲಿ ಬಕ್ಷು ಸಾಬ್, ಅಕ್ಷಂ ಪಾಷ, ಸೈಯದ್ ಯಾಸಿನ್ ಇದ್ದರು.

ಡಿಕೆಶಿ ರಕ್ತದಲ್ಲೇ ಕಾಂಗ್ರೆಸ್ ಇದೆ

ಡಿ.ಕೆ.ಶಿವಕುಮಾರ್‌ ರಕ್ತದಲ್ಲೇ ಕಾಂಗ್ರೆಸ್‌ ಇದೆ. ನಾವೆಲ್ಲಾ ಬೇರೆ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಬಂದಂಥವರು. ಇಡೀ ರಕ್ತ ಬದಲಾವಣೆ ಮಾಡಲು ಸಾಧ್ಯವೇ ಎಂದು ಸಚಿವ ಜಮೀರ್‌ ಅಹ್ಮದ್‌ ‍ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷವು ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಬಳಿಕ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದರು.

ಬಿಜೆಪಿಗೆ ಹಿಂದೂ ಮುಸ್ಲಿಂ ಇಬ್ಬರೂ ಬೇಕಿಲ್ಲ

ಕಾಂಗ್ರೆಸ್ ಮತ್ತು ಬಿಜೆಪಿ ಇತಿಹಾಸವನ್ನು ಜನರ ಮುಂದೆ ಇಡುತ್ತೇವೆ. ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮಗಳನ್ನು ತೋರಿಸಿ ನಾವು ಮತ ಕೇಳುತ್ತೇವೆ. ಇದು ಬಿಜೆಪಿಯಿಂದ ಸಾಧ್ಯವೇ? ಹಿಂದೂ ಮುಸ್ಲಿಮರು ಎಂದು ಹೇಳುವುದನ್ನು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ. ಅವರಿಗೆ ಹಿಂದೂ ಮುಸ್ಲಿಂ ಇಬ್ಬರೂ ಬೇಕಾಗಿಲ್ಲ ಎಂದು ಸಚಿವ ಜಮೀರ್‌ ಅಹ್ಮದ್‌ ಟೀಕಾ ಪ್ರಹಾರ ನಡೆಸಿದರು.