
ಕೆ.ಎಚ್.ಮುನಿಯಪ್ಪ
ಕೋಲಾರ: ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಲಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾವು ತೀರ್ಮಾನ ಮಾಡುವುದಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಹಾಗೂ ಸಚಿವರ ಬದಲಾವಣೆ ಬಗ್ಗೆ ಮಾತನಾಡುವುದು ಅಪ್ರಸ್ತುತ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ’ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಾಗ ಸಚಿವ ಸತೀಶ್ ಜಾರಕಿಹೊಳಿ ಹೆಸರೂ ಕೇಳಿ ಬರುತ್ತದೆ ಎಂಬ ಪ್ರಶ್ನೆಗೆ, ‘ಅವರು ಕೂಡ ಪಕ್ಷದ ನಿಷ್ಠಾವಂತ ಮುಖಂಡ. ಅವರು ಸಹ ಎಲ್ಲಾ ರೀತಿಯಲ್ಲೂ ಅರ್ಹರಿದ್ದಾರೆ. ಚಿತ್ರದುರ್ಗದಲ್ಲಿ ಎಲ್ಲಾ ಸಮುದಾಯದವರನ್ನು ಸೇರಿಸಿ ಕಾರ್ಯಕ್ರಮ ರೂಪಿಸಿದ್ದರು’ ಎಂದರು.
‘ಕೆ.ಎಚ್. ಮುನಿಯಪ್ಪ ಮುಖ್ಯಮಂತ್ರಿ ಆದರೆ ಸಂತೋಷ’ ಎಂಬ ಗೃಹ ಸಚಿವ ಜಿ.ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದು ಹೇಳಲು ಅವಕಾಶವಿಲ್ಲ. ನನಗೆ ಮುಖ್ಯಮಂತ್ರಿ ಆಗುವ ಆಸೆಯೂ ಇಲ್ಲ’ ಎಂದರು.
ಪರಮೇಶ್ವರ ಅತ್ಯಂತ ಹಿರಿಯ ನಾಯಕ. ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಅತ್ಯುತ್ತಮ ಆಡಳಿತ ನೀಡಿದವರು. ಈಗಲೂ ಅವರು ಸಚಿವರಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ರಾಜ್ಯ ಆರ್ಯವೈಷ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಮಪ್ರಸಾದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಮುಖಂಡರಾದ ಕೆ.ಜಯದೇವ್, ಯಲ್ಲಪ್ಪ, ಪ್ರಸಾದ್ ಬಾಬು, ನವೀನ್ ಗೌಡ ಇದ್ದರು.