ಕೋಲಾರ: ‘ನನ್ನ ಖರೀದಿಸುವ ಶಕ್ತಿ ಕರ್ನಾಟಕದಲ್ಲಿ ಯಾರಿಗೂ ಇಲ್ಲ. ನನ್ನ ರೇಟ್ ಬೇರೆ ಇದೆ. ಕರ್ನಾಟಕ ರಾಜ್ಯವನ್ನು ನನ್ನ ಹೆಸರಿಗೆ ಬರೆದು ಕೊಟ್ಟರೆ ಹೋಗುತ್ತೇನೆ. ಆದರೆ, ನನ್ನನ್ನು ಯಾರೂ ಸಂಪರ್ಕಿಸಿಲ್ಲ, ಸರ್ಕಾರ ಬೀಳಿಸುವ ಕನಸನ್ನು ಯಾರೂ ಕಾಣಬೇಡಿ’ ಎಂದು ಕೋಲಾರ ಶಾಸಕ ಕಾಂಗ್ರೆಸ್‌ನ ಕೊತ್ತೂರು ಮಂಜುನಾಥ್, ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ 135 ಶಾಸಕರು ಇದ್ದೇವೆ. ಸರ್ಕಾರ ಬೀಳಿಸಲು ಸಾಧ್ಯವಿಲ್ಲ’ ಎಂದರು.
‘ಕಾಂಗ್ರೆಸ್ ಶಾಸಕ ರವಿ ಗಣಿಗ ಅವರಿಗೆ ಯಾರಾದರೂ ಹಣ ನೀಡಲು ಮುಂದೆ ಬಂದಿದ್ದಾರೋ ಏನೋ ನನಗೆ ಗೊತ್ತಿಲ್ಲ. ಅವರ ಹೇಳಿಕೆಯನ್ನು ನಾನೂ ಗಮನಿಸಿದ್ದೇನೆ’ ಎಂದು ನುಡಿದರು.
‘ನನಗೆ ಮಂತ್ರಿ, ನಿಗಮ ಮಂಡಳಿ ಸ್ಥಾನ ಬೇಡವೇ ಬೇಡ. ಸಚಿವ ಸ್ಥಾನ ಬೇಕು ಎನ್ನುವ ಶಾಸಕರು ರಾಜೀನಾಮೆ ನೀಡಿ ಮನೆಗೆ ಹೋಗಲಿ. ಜನ ಗೆಲ್ಲಿಸಿರುವುದು ಕ್ಷೇತ್ರದ ಕೆಲಸ ಮಾಡಲು. ಈಗಾಗಲೇ ಶಾಸಕರಿಗೆ ಅಭಿವೃದ್ಧಿ ಕೆಲಸಗಳಿಗೆಂದು ಲೋಕೋಪಯೋಗಿ ಇಲಾಖೆಯಿಂದ ತಲಾ ₹ 20 ಕೋಟಿ ಅನುದಾನ ಬಂದಿದೆ. ಇನ್ನೂ ಅನುದಾನ ಸಿಗಲಿದೆ’ ಎಂದರು.
‘ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬುದು ಸುಳ್ಳು. ಬದಲಾವಣೆ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ’ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಬರ ಅಧ್ಯಯನ ಕುರಿತು ಪ್ರತಿಕ್ರಿಯಿಸಿ, ‘ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ, ಜನರ ಬಳಿ ಹೋಗಬೇಕಲ್ಲ. ಹೀಗಾಗಿ, ಬರ ಅಧ್ಯಯನ ಹೆಸರಿನಲ್ಲಿ ಓಡಾಡಿಕೊಂಡಿರುತ್ತಾರೆ’ ಎಂದರು.
‘ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ಧವಾಗಿದ್ದಾರೆ. ಅವರು ಸ್ಥಳೀಯರೇ ಆಗಿದ್ದು, ಈಗಲೇ ಹೆಸರನ್ನು ಬಹಿರಂಗಪಡಿಸುವುದಿಲ್ಲ’ ಎಂದು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.