ADVERTISEMENT

ಉಪ ನಿಬಂಧಕರ ಕಚೇರಿಗೆ ಮುತ್ತಿಗೆ

ಕೆಜಿಎಫ್ ಟಿಎಪಿಸಿಎಂಎಸ್ ವಿಭಜನೆಯಲ್ಲಿ ಕಾನೂನು ಉಲ್ಲಂಘನೆ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 14:47 IST
Last Updated 25 ಅಕ್ಟೋಬರ್ 2021, 14:47 IST
ಕೆಜಿಎಫ್ ಟಿಎಪಿಸಿಎಂಎಸ್ ವಿಭಜನೆಯಲ್ಲಿ ಕಾನೂನು ಉಲ್ಲಂಘಿಸಿರುವ ಸಹಕಾರ ಇಲಾಖೆ ಉಪ ನಿಬಂಧಕ ವೆಂಕಟೇಶ್‌ರನ್ನು ಅಮಾನತು ಮಾಡುವಂತೆ ಆಗ್ರಹಿಸಿ ರೈತರು ಹಾಗೂ ಮಹಿಳೆಯರು ಶಾಸಕಿ ಎಂ.ರೂಪಕಲಾ ನೇತೃತ್ವದಲ್ಲಿ ಕೋಲಾರದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು
ಕೆಜಿಎಫ್ ಟಿಎಪಿಸಿಎಂಎಸ್ ವಿಭಜನೆಯಲ್ಲಿ ಕಾನೂನು ಉಲ್ಲಂಘಿಸಿರುವ ಸಹಕಾರ ಇಲಾಖೆ ಉಪ ನಿಬಂಧಕ ವೆಂಕಟೇಶ್‌ರನ್ನು ಅಮಾನತು ಮಾಡುವಂತೆ ಆಗ್ರಹಿಸಿ ರೈತರು ಹಾಗೂ ಮಹಿಳೆಯರು ಶಾಸಕಿ ಎಂ.ರೂಪಕಲಾ ನೇತೃತ್ವದಲ್ಲಿ ಕೋಲಾರದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು   

ಕೋಲಾರ: ಕೆಜಿಎಫ್ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ವಿಭಜನೆಯಲ್ಲಿ ಸಹಕಾರ ಇಲಾಖೆ ಉಪ ನಿಬಂಧಕ ವೆಂಕಟೇಶ್‌ ಅವರು ಕಾನೂನು ಉಲ್ಲಂಘಿಸಿದ್ದು, ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಕೆಜಿಎಫ್ ತಾಲ್ಲೂಕಿನ ರೈತರು ಹಾಗೂ ಮಹಿಳೆಯರು ಶಾಸಕಿ ಎಂ.ರೂಪಕಲಾ ನೇತೃತ್ವದಲ್ಲಿ ಇಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಉಪ ನಿಬಂಧಕರ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಮತ್ತು ಮಹಿಳೆಯರು, ‘ವೆಂಕಟೇಶ್ ಅವರು ರಾಜಕೀಯ ಪಕ್ಷವೊಂದರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಕಚೇರಿ ಪ್ರವೇಶದ್ವಾರದಲ್ಲಿನ ವೆಂಕಟೇಶ್‌ರ ನಾಮಫಲಕ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು.

‘ಬಂಗಾರಪೇಟೆ ಟಿಎಪಿಸಿಎ.ಎಸ್‌ನಿಂದ ವಿಭಜನೆಯಾಗಿ ಕೆಜಿಎಫ್ ಕ್ಷೇತ್ರಕ್ಕೆ ಪ್ರತ್ಯೇಕ ಟಿಎಪಿಸಿಎಂಎಸ್ ರಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ ಟಿಎಪಿಸಿಎಂಎಸ್ ಪ್ರತ್ಯೇಕಿಸಲು ಅವಕಾಶ ನೀಡಿದೆ. ಆದರೆ, ಆಡಳಿತ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವ ಉಪ ನಿಬಂಧಕ ವೆಂಕಟೇಶ್‌ ಅವರು ಕಾನೂನು ಪಾಲಿಸಿಲ್ಲ’ ಎಂದು ದೂರಿದರು.

ADVERTISEMENT

‘ವೆಂಕಟೇಶ್ ಅವರು ಏಕಪಕ್ಷೀಯವಾಗಿ ಮಾಜಿ ಶಾಸಕ ವೈ.ಸಂಪಂಗಿಯವರ ಮಗ ಪ್ರವೀಣ್‌ರನ್ನು ಟಿಎಪಿಸಿಎಂಎಸ್‌ನ ಚೀಫ್ ಪ್ರಮೋಟರ್ ಆಗಿ ನೇಮಿಸಿದ್ದಾರೆ. ಅವರೇನು ಇಲಾಖೆಯ ದಲ್ಲಾಳಿಯಾ? ನೋಟಿಫಿಕೇಷನ್ ಹೊರಡಿಸದೆ, ಹಳೆ ಷೇರುದಾರರ ಸಭೆ ನಡೆಸದೆ ಹಾಗೂ ಹೊಸ ಷೇರುಗಳನ್ನು ಪಡೆದಂತೆ ತೋರಿಸಿ, ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವ ಉಪ ನಿಬಂಧಕರನ್ನು ಅಮಾನತು ಮಾಡಬೇಕು’ ಎಂದು ಶಾಸಕಿ ರೂಪಕಲಾ ಒತ್ತಾಯಿಸಿದರು.

‘ಕೆಜಿಎಫ್ ತಾಲ್ಲೂಕಾಗಿ ರಚನೆಯಾದ ನಂತರ ಹಂತ ಹಂತವಾಗಿ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಸಹಕಾರ ಸಂಘಗಳ ಉಪ ನಿಬಂಧಕರು ಆಡಳಿತ ಪಕ್ಷದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ. ರೈತರನ್ನು ಕತ್ತಲಲ್ಲಿಟ್ಟು ಅವರಿಗೆ ದಕ್ಕೆ ಉಂಟು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಪ್ರತಿಭಟನಾಕಾರರ ಪಟ್ಟು: ವೆಂಕಟೇಶ್‌ ಅವರು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆದರೆ, ಮೂರ್ನಾಲ್ಕು ತಾಸು ಕಳೆದರೂ ಉಪ ನಿಬಂಧಕರು ಸ್ಥಳಕ್ಕೆ ಬಾರದ ಕಾರಣ ಆಕ್ರೋಶಗೊಂಡ ಪ್ರತಿಭಟನಾಕಾರರು ಕಚೇರಿಯೊಳಗೆ ನುಗ್ಗಿ ವೆಂಕಟೇಶ್‌ರ ನಾಮಫಲಕ ಕಿತ್ತೆಸೆದರು.

ಬಳಿಕ ರೂಪಕಲಾ ಅವರು ಬೆಂಗಳೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಜೆ.ಆರ್.ಅಶ್ವಥ್‌ ಅವರಿಗೆ ಕರೆ ಮಾಡಿ, ‘ಬೆಳಿಗ್ಗೆಯಿಂದಲೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ವೆಂಕಟೇಶ್‌ ಅವರ ಧೋರಣೆ ಏನು? ಕೆಜಿಎಫ್ ಕ್ಷೇತ್ರದ ರೈತರ ಬಗ್ಗೆ ಏಕೆ ಅಸಡ್ಡೆ?’ ಎಂದು ತರಾಟೆಗೆ ತೆಗೆದುಕೊಂಡರು.

‘ಬೇಜವಾಬ್ದಾರಿ ಅಧಿಕಾರಿ ವೆಂಕಟೇಶ್‌ ಅವರು ಸ್ಥಳಕ್ಕೆ ಬಂದು ರೈತರಿಗೆ ಸಮಜಾಯಿಷಿ ನೀಡುವವರೆಗೆ ಸ್ಥಳ ಬಿಟ್ಟು ಹೋಗುವುದಿಲ್ಲ. ನಮ್ಮ ಕ್ಷೇತ್ರದ ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ. ವೆಂಕಟೇಶ್‌ ಅವರನ್ನು ಸೇವೆಯಿಂದ ಅಮಾನತ ಮಾಡಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ತಾಕೀತು ಮಾಡಿದರು.

ನೇಮಕ ರದ್ದುಪಡಿಸಿ: ‘ಚೀಫ್ ಪ್ರಮೋಟರ್‌ ನೇಮಕದ ಆದೇಶ ರದ್ದುಪಡಿಸಬೇಕು. ಕಾನೂನು ರೀತಿ ಷೇರು ಸಂಗ್ರಹಿಸಬೇಕು. ನೋಟಿಫಿಕೇಷನ್ ಮೂಲಕ ಎಲ್ಲಾ ಷೇರುದಾರರ ಸಲಹೆ ಪಡೆದು ಚೀಫ್ ಪ್ರಮೋಟರ್‌ ನೇಮಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ಕೆಜಿಎಫ್‌ ಕ್ಷೇತ್ರದ ಮುಖಂಡರಾದ ಶ್ರೀಧರ್‌ರೆಡ್ಡಿ, ವಿಜಯ್‌ಶಂಕರ್‌, ವಿಜಯ ರಾಘವರೆಡ್ಡಿ, ಪದ್ಮನಾಭರೆಡ್ಡಿ, ರಾಧಕೃಷ್ಣಾರೆಡ್ಡಿ, ಬಾಲಾಕೃಷ್ಣ, ಪ್ರಸನ್ನ, ಚನ್ನಕೇಶವರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.