ADVERTISEMENT

ಉದ್ಯೋಗಕ್ಕೆ ಕೌಶಲ ತರಬೇತಿ ಅಗತ್ಯ: ಕೆ.ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 15:45 IST
Last Updated 11 ಮಾರ್ಚ್ 2022, 15:45 IST
ಕೋಲಾರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ನೆರೆ-ಹೊರೆ ಯುವಜನ ಸಂಸತ್ ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿದರು
ಕೋಲಾರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ನೆರೆ-ಹೊರೆ ಯುವಜನ ಸಂಸತ್ ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿದರು   

ಕೋಲಾರ: ‘ಜನರ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಪ್ರತಿಯೊಬ್ಬರು ಯೋಜನೆಗಳ ಸದುಪಯೋಗ ಪಡೆಯಬೇಕು’ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ಕಿವಿಮಾತು ಹೇಳಿದರು.

ಜಿಲ್ಲಾ ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನೆರೆ-ಹೊರೆ ಯುವಜನ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೌಶಲಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ತಾಂತ್ರಿಕತೆ ಬದಲಾವಣೆ ಆಗುತ್ತಿರುವುದರಿಂದ ಪ್ರತಿಯೊಬ್ಬರು ಕೌಶಲ ತರಬೇತಿ ಪಡೆಯುವುದು ಅಗತ್ಯ. ದೇಶದಲ್ಲಿ ಹೊಸ ಉದ್ಯೋಗ ವ್ಯವಸ್ಥೆ ಎಂಬುದು ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ 2015ರಲ್ಲಿ ಸ್ಕಿಲ್ ಇಂಡಿಯಾ ಯೋಜನೆಯೊಂದಿಗೆ ದೇಶದಾದ್ಯಂತ ಪ್ರತಿ ರಾಜ್ಯದಲ್ಲಿ ಕೌಶಲ ತರಬೇತಿ ಸಂಸ್ಥೆ ಸ್ಥಾಪಿಸಿದೆ’ ಎಂದು ವಿವರಿಸಿದರು.

ADVERTISEMENT

‘ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಯೋಜನೆಯಡಿ ನಮಗೆ ಬೇಕಾದ ಸರಕು ಸೇವೆಗಳನ್ನು ದೇಶದಲ್ಲಿ ಉತ್ಪಾದಿಸಬೇಕಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ದೇಶದ ಯುವ ಜನತೆಯನ್ನು ಉದ್ಯೋಗಕ್ಕೆ ಉತ್ತೇಜನ ನೀಡಲು ಕೌಶಲ ತರಬೇತಿ ಅತ್ಯವಶ್ಯಕ’ ಎಂದು ಅಭಿಪ್ರಾಯಪಟ್ಟರು.

‘2014ರಲ್ಲಿ ಪ್ರಧಾನಮಂತ್ರಿಗಳು ಯುವಜನ ಸಂಸತ್ ಕಾರ್ಯಕ್ರಮವನ್ನು ದೇಶದಲ್ಲಿ ಆರಂಭಿಸಿದರು. ಯುವ ಜನತೆ ಸಾಮಾಜಿಕ ಜಾಲತಾಣಗಳ ದಾಸರಾಗಿದ್ದಾರೆ. ಮೊಬೈಲ್‌ ಹಾಗೂ ಇಂಟರ್‌ನೆಟ್‌ ಬಳಕೆಯ ಗೀಳು ಬಿಟ್ಟು ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಜಿಲ್ಲಾ ಯುವಜನ ಅಧಿಕಾರಿ ವಿನಯ್‌ಕುಮಾರ್ ಸಲಹೆ ನೀಡಿದರು.

ಮಹಿಳಾ ಸಮಾಜ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಮಂಜುನಾಥ, ಇಟಿಸಿಎಂ ಕಾಲೇಜ್ ಆಫ್ ನರ್ಸಿಂಗ್‍ನ ಎನ್ಎಸ್ಎಸ್ ಅಧಿಕಾರಿ ಎ.ಆರ್‌.ಹರೀಶ್‌ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಯ ಜಿಲ್ಲಾ ಸಂಘಟಕ ಬಾಬು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.